ಬೆಂಗಳೂರಿನಲ್ಲಿ ಸರಗಳ್ಳತನ, ಗೃಹ ಸಚಿವರು ಕೊಟ್ಟ ಉತ್ತರ
ಬೆಂಗಳೂರು, ಜುಲೈ 15 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸರಗಳ್ಳರ ಹಾವಳಿ ಹೆಚ್ಚುತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಕಳೆದ 6 ತಿಂಗಳಿನಲ್ಲಿ 186 ಸರಗಳವು ಪ್ರಕರಣಗಳು ನಗರದಲ್ಲಿ ನಡೆದಿವೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.
ಮಂಗಳವಾರದ ಕಲಾಪದಲ್ಲಿ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ ಆರ್.ಅಶೋಕ್ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಗೃಹ ಸಚಿವರು, ಬೆಂಗಳೂರು ನಗರದಲ್ಲಿ ಸರಗಳ್ಳತನ ಹೆಚ್ಚಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಸರಗಳ್ಳತನ ತಡೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. [ಸರಗಳ್ಳರ ವಿರುದ್ಧ ಗೂಂಡಾ ಕಾಯ್ದೆ]

ಸರಗಳ್ಳತನ ತಡೆಗಟ್ಟಲು, ಆರೋಪಿಗಳನ್ನು ಬಂಧಿಸಲು ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸರಗಳ್ಳತನ ತಡೆಗಟ್ಟುವ ಸಲುವಾಗಿ ಪೊಲೀಸ್ ಠಾಣೆ ಸರಹದ್ದುಗಳಲ್ಲಿ 'ಚೈನ್ ಸ್ನ್ಯಾಚರ್ಸ್ ಸ್ಪೆಶಲ್ ಡ್ರೈವ್' ಎಂಬ ವಿಶೇಷ ಅಭಿಯಾನವನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಉತ್ತರ ನೀಡಿದರು. [1 ಗಂಟೆಯಲ್ಲಿ 10 ಕಡೆ ಸರಗಳ್ಳತನ]
ನಗರದ ಆಯಾ ಕಟ್ಟಿನ ಪ್ರದೇಶಗಳನ್ನು ಗುರುತಿಸಿ ಪ್ರತಿದಿನ ಹಗಲು ಮತ್ತು ರಾತ್ರಿ ಸಮಯದಲ್ಲಿ ವಾಹನ ತಪಾಸಣೆ ಮಾಡಲಾಗುತ್ತಿದೆ. ಮುಂಜಾನೆ ಸಮಯದಲ್ಲಿ ಸರ ಅಪಹರಣಗಳು ಜರುಗದಂತೆ ನೋಡಿಕೊಳ್ಳಲು ಬೀಟ್ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ 'ಗುಡ್ ಮಾರ್ನಿಂಗ್ ಬೀಟ್' ನಿರ್ವಹಿಸಲಾಗುತ್ತಿದೆ ಎಂದರು.
ಕಳೆದ 6 ತಿಂಗಳಿನಲ್ಲಿ 186 ಸರಗಳವು ಪ್ರಕರಣಗಳು ನಗರದಲ್ಲಿ ನಡೆದಿವೆ. 2014 ರಿಂದ 2015ರ ಜೂನ್ 30 ರವರೆಗೆ ಬೆಂಗಳೂರು ನಗರದಲ್ಲಿ ನಡೆದಿರುವ ಸರಗಳ್ಳತನ ಪ್ರಕರಣಗಳಲ್ಲಿ ಒಟ್ಟು 714 ಪ್ರಕರಣಗಳನ್ನು ದಾಖಲಿಸಿ 534 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಪದೇ ಪದೇ ಸರಗಳ್ಳತನದಲ್ಲಿ ಭಾಗಿಯಾಗುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಲು ದಾಖಲೆ ಮತ್ತು ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ದಂಡಾಧಿಕಾರಿಗಳ ಅಧಿಕಾರವನ್ನು ನೀಡಲಾಗಿದೆ. ಇದರಿಂದ ಭದ್ರತಾ ಕಾಯ್ದೆಯಡಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ ಎಂದು ಸಚಿವರು ಸದನಕ್ಕೆ ತಿಳಿಸಿದರು.












Click it and Unblock the Notifications