ಬೆಂಗಳೂರಿನ ಶಾಲೆಗಳಲ್ಲಿ ಯುವಜನರ ಮಾನಸಿಕ ಆರೋಗ್ಯ ಜಾಗೃತಿ: 16ರ ಯುವತಿಯ ಅನ್‌ಸ್ಪೋಕನ್ ಕಿರುಚಿತ್ರದ ಅದ್ಭುತ ಪ್ರಯತ್ನ
ಬೆಂಗಳೂರು: ಯುವಜನರು ಮಾನಸಿಕವಾಗಿ ಕುಗ್ಗಿದಾಗ ಅಥವಾ ಖಿನ್ನತೆಗೆ ಒಳಗಾದಾಗ ತಮ್ಮ ಭಾವನೆಗಳನ್ನ ವ್ಯಕ್ತಪಡಿಸಲು ಪದಗಳೇ ಸಿಗುವುದಿಲ್ಲ. "ನೀವು ಮುಕ್ತವಾಗಿ ಮಾತನಾಡಿ" ಎಂದು ಎಲ್ಲರೂ ಸಲಹೆ ನೀಡುತ್ತಾರೆ, ಆದರೆ ಒಂದು ವೇಳೆ ಅವರು ಧೈರ್ಯ ಮಾಡಿ ಮಾತನಾಡಿದರೂ, ಸುತ್ತಮುತ್ತಲಿನ ಸಮಾಜ ಅದನ್ನ ಗಂಭೀರವಾಗಿ ಪರಿಗಣಿಸುತ್ತದೆಯೇ ಅಥವಾ ಅವರ ಸಮಸ್ಯೆಗಳನ್ನ ಕಡೆಗಣಿಸುತ್ತದೆಯೇ? ಇಂತಹ ಪ್ರಮುಖ ಪ್ರಶ್ನೆಗಳಿಗೆ ಉತ್ತರವೇ 16 ವರ್ಷದ ಯುವ ನಿರ್ದೇಶಕಿ ಹಾಗೂ ಸಂಶೋಧಕಿ ಇಮಾನ್ ಝರಾ ಖಾನ್ ಅವರ ಅನ್‌ಸ್ಪೋಕನ್ ಚಲನಚಿತ್ರ.
ಯುವಜನರು ತಮ್ಮ ಭಾವನೆಗಳನ್ನ ಮುಕ್ತವಾಗಿ ಹಂಚಿಕೊಳ್ಳಲು ಮತ್ತು ಸೂಕ್ತ ಬೆಂಬಲ ಪಡೆಯಲು ಸುರಕ್ಷಿತ ವಾತಾವರಣದ ಅಗತ್ಯವಿದೆ ಎಂಬುದನ್ನ ಈ ಚಿತ್ರ ಹೇಳುತ್ತದೆ. ಯುವಜನರ ಮಾನಸಿಕ ಆರೋಗ್ಯ ಎಂಬುದು ಕೇವಲ ಚರ್ಚೆಯ ವಿಷಯವಾಗಿರದೆ, ಪ್ರಾಯೋಗಿಕವಾಗಿ ಪರಿಹಾರ ಕಂಡುಕೊಳ್ಳಬೇಕಾದ ಗಂಭೀರ ವಿಚಾರ ಎಂಬುದನ್ನ ಇಮಾನ್ ಈ ಮೂಲಕ ಸಾಬೀತುಪಡಿಸಿದ್ದಾರೆ.

ಪ್ರಾಜೆಕ್ಟ್ ಸೇಫ್ ಮೂಲಕ ಶಾಲೆಗಳಲ್ಲಿ ಜಾಗೃತಿ
ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ಇತ್ತೀಚೆಗೆ ಬೆಂಗಳೂರಿನಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಕೇವಲ ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಆಳವಾದ ಮತ್ತು ನಿರಂತರ ಚರ್ಚೆ ಹುಟ್ಟುಹಾಕುವ ಉದ್ದೇಶದಿಂದ 'ಪ್ರಾಜೆಕ್ಟ್ ಸೇಫ್ʼ ಅಡಿಯಲ್ಲಿ ಈ ಅಭಿಯಾನವನ್ನ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯ ಭಾಗವಾಗಿ 'ಅನ್‌ಸ್ಪೋಕನ್' ಚಿತ್ರವನ್ನ ಬೆಂಗಳೂರಿನ ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 20 ಶಾಲೆಗಳಲ್ಲಿ ಹಂತ ಹಂತವಾಗಿ ಪ್ರದರ್ಶಿಸಲು ನಿರ್ಧರಿಸಲಾಗಿದೆ.
ಇದರ ಜೊತೆಗೆ, ಕೇವಲ ಚಿತ್ರ ಪ್ರದರ್ಶನ ಮಾತ್ರವಲ್ಲದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡದ ಲಕ್ಷಣಗಳನ್ನ ಆರಂಭದಲ್ಲೇ ಗುರುತಿಸಲು ಮತ್ತು ಸೂಕ್ತವಾಗಿ ಸ್ಪಂದಿಸಲು ಅನುಕೂಲವಾಗುವಂತೆ 'ಮಾನಸಿಕ ಆರೋಗ್ಯ ಪ್ರಥಮ ಚಿಕಿತ್ಸೆ' ಕಾರ್ಯಕ್ರಮವನ್ನೂ ಶಾಲಾ ಮಟ್ಟದಲ್ಲಿ ಅಳವಡಿಸಲಾಗುತ್ತಿದೆ.
"ಯುವಜನರಿಗೆ ಮಾತನಾಡಲು ಹೇಳುವುದು ಸುಲಭ, ಆದರೆ ಅವರಿಗೆ ತಮ್ಮೊಳಗಿನ ತಳಮಳಗಳನ್ನ ವಿವರಿಸಲು ಪದಗಳಿರುವುದಿಲ್ಲ. ಅವರು ಮಾತನಾಡಿದರೂ ಕೇಳುವ ವ್ಯವಧಾನ ಸಮಾಜಕ್ಕಿದೆಯೇ ಎಂಬುದೇ ನನ್ನ ದೊಡ್ಡ ಪ್ರಶ್ನೆ" ಎನ್ನುತ್ತಾರೆ ಇಮಾನ್.
'ಅನ್‌ಸ್ಪೋಕನ್' ಚಿತ್ರದ ಕಥೆ
'ಅನ್‌ಸ್ಪೋಕನ್' ಚಿತ್ರವು ನಾಲ್ಕು ವಿಭಿನ್ನ ಹಿನ್ನೆಲೆಯ ಹದಿಹರೆಯದವರ ಕಥೆಯನ್ನ ಪರದೆಯ ಮೇಲೆ ತರುತ್ತದೆ. ಮೊದಲನೇಯದಾಗಿ, ದೇಹದ ಆಕಾರ ಮತ್ತು ಆತ್ಮವಿಶ್ವಾಸದ ಕೊರತೆಯಿಂದ ಒಳಗೊಳಗೇ ನರಳುತ್ತಿರುವ ಜನಪ್ರಿಯ ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್. ಎರಡನೇಯದಾಗಿ, ಕಲಾಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತಿ ಹೊಂದಿದ್ದರೂ ಸಮಾಜದ ಸಾಂಪ್ರದಾಯಿಕ ಪುರುಷತ್ವದ ನಿರೀಕ್ಷೆಗಳ ಸುಳಿಯಲ್ಲಿ ಸಿಲುಕಿದ ಲಕ್ನೋ ಮೂಲದ ಮಧ್ಯಮ ವರ್ಗದ ಹುಡುಗ.
ಮೂರನೇಯದಾಗಿ, ಆರ್ಥಿಕ ಸಂಕಷ್ಟಗಳ ನಡುವೆಯೂ ಓಟಗಾರನಾಗುವ ದೊಡ್ಡ ಕನಸು ಕಾಣುತ್ತಿರುವ ಅಸ್ಸಾಂನ ಯುವಕ. ಮತ್ತು ನಾಲ್ಕನೇಯದಾಗಿ, ಒಂಟಿತನ ಹಾಗೂ ಪೋಷಕರ ಅತಿಯಾದ ನಿರೀಕ್ಷೆಗಳ ಭಾರ ಹೊತ್ತಿರುವ ಬೋರ್ಡಿಂಗ್ ಶಾಲೆಯ ಹುಡುಗಿ.
ಈ ನಾಲ್ವರ ಹಿನ್ನೆಲೆಗಳು ಬೇರೆಯಾಗಿದ್ದರೂ, ತಮ್ಮ ನೋವನ್ನ ವ್ಯಕ್ತಪಡಿಸಲಾಗದ ಅಸಹಾಯಕತೆ ಅವರನ್ನ ಬೆಸೆಯುತ್ತದೆ. ಈ ಚಿತ್ರದಲ್ಲಿ ಯಾವುದೇ ನಾಟಕೀಯ ತಿರುವುಗಳಿಲ್ಲ ಅಥವಾ ತಕ್ಷಣದ ಪರಿಹಾರಗಳಿಲ್ಲ. ಬದಲಾಗಿ, ವೀಕ್ಷಕರು ಈ ಪಾತ್ರಗಳಲ್ಲಿ ತಮ್ಮನ್ನ ತಾವು ಕಂಡುಕೊಳ್ಳುವಂತಹ ಸನ್ನಿವೇಶಗಳನ್ನ ಕಟ್ಟಿಕೊಡಲಾಗಿದೆ.
ಶಾಲಾ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ
ತನ್ನ ಸ್ನೇಹಿತರು ಮತ್ತು ಸಂಬಂಧಿಕರನ್ನ ಹತ್ತಿರದಿಂದ ಗಮನಿಸಿದ ಇಮಾನ್, ಈ ಚಿತ್ರದ ಕಲ್ಪನೆಯನ್ನ ಹುಟ್ಟುಹಾಕಿದರು. ಮಾನಸಿಕ ಆರೋಗ್ಯದ ಕುರಿತು ಸಮಾಜದಲ್ಲಿರುವ ಕಳಂಕ ಮತ್ತು ಸಹಾಯ ಕೇಳಲು ಯುವಕರು ಹಿಂಜರಿಯುತ್ತಿರುವ ಬಗ್ಗೆ ಅವರು ಆಳವಾದ ಸಂಶೋಧನೆ ನಡೆಸಿದರು. ಇದಕ್ಕಾಗಿ ಸುಮಾರು 750 ಶಾಲಾ ವಿದ್ಯಾರ್ಥಿಗಳನ್ನ ಸಮೀಕ್ಷೆಗೊಳಪಡಿಸಿ ಅವರ ಅನುಭವಗಳನ್ನ ಕಲೆಹಾಕಿದರು.
"ಅಂಕಿ-ಅಂಶಗಳು ಜನರ ವರ್ತನೆಯನ್ನ ಬದಲಾಯಿಸುವುದಿಲ್ಲ, ಕಥೆಗಳು ಬದಲಾಯಿಸುತ್ತವೆ" ಎಂಬುದು ಇಮಾನ್ ಅವರ ದೃಢವಾದ ನಂಬಿಕೆ. ಕೇವಲ ಡೇಟಾಗಳನ್ನ ಓದಿ ಮರೆಯುವ ಬದಲು, ಕಥೆಗಳ ಮೂಲಕ ಭಾವನಾತ್ಮಕವಾಗಿ ಜನರನ್ನ ತಲುಪಬಹುದು ಎನ್ನುತ್ತಾರೆ ಅವರು. ಶಾಲಾ ಮಟ್ಟದಲ್ಲಿ ಕಥೆ ಹೇಳುವ ಮಾಧ್ಯಮವು ವಿದ್ಯಾರ್ಥಿಗಳ ಮಾನಸಿಕ ಸ್ವಾಸ್ಥ್ಯದ ಮೇಲೆ ಬೀರುವ ಪ್ರಭಾವವನ್ನ ಅಧ್ಯಯನ ಮಾಡಲು ಇಮಾನ್ ಆಶಿಸಿದ್ದಾರೆ.
ಈ ಅಧ್ಯಯನದ ಆಧಾರದ ಮೇಲೆ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಭವಿಷ್ಯದಲ್ಲಿ ಒಂದು ಭದ್ರವಾದ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಅವರ ಮುಖ್ಯ ಗುರಿಯಾಗಿದೆ. ಕೇವಲ 16ನೇ ವಯಸ್ಸಿನಲ್ಲಿಯೇ ಮಾನಸಿಕ ಆರೋಗ್ಯದಂತಹ ಸೂಕ್ಷ್ಮ ವಿಷಯವನ್ನ ಕೈಗೆತ್ತಿಕೊಂಡಿರುವ ಇಮಾನ್ ಅವರ ಈ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿ.


Click it and Unblock the Notifications
