ಬಿಡದಿ-ನೈಸ್ ರಸ್ತೆಗೆ ಸಂಪರ್ಕ: 13 ಕಿ. ಮೀ. ಲಿಂಕ್ ರಸ್ತೆ ನಿರ್ಮಾಣ
ಬೆಂಗಳೂರು, ನವೆಂಬರ್ 20: ಬೆಂಗಳೂರು ನಗರದಲ್ಲಿ 13 ಕಿ. ಮೀ. ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆಯೊಂದು ಮತ್ತೆ ಚರ್ಚೆಗೆ ಬಂದಿದೆ. ಈ ರಸ್ತೆ ಕುರಿತು 1995ರಲ್ಲಿಯೇ ಸರ್ಕಾರ ಮತ್ತು ನೈಸ್ ಸಂಸ್ಥೆ ನಡುವೆ ಒಪ್ಪಂದವಾಗಿತ್ತು. ಈ ರಸ್ತೆ ಬಿಡದಿ-ನೈಸ್ ರಸ್ತೆ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬಿಡದಿ ಕೈಗಾರಿಕಾ ಕಾರಿಡಾರ್‌ಗೆ ಸಾಗುವ ವಾಹನ ಸವಾರರು ಈ ರಸ್ತೆಗಾಗಿ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿದ್ದಾರೆ.
ಬಿಡದಿ-ಹೆಮ್ಮಿಗೆಪುರ ನಡುವೆ ಈ 13 ಕಿ. ಮೀ. ರಸ್ತೆ ನಿರ್ಮಾಣವಾಗಲಿದ್ದು, ನೈಸ್ ರಸ್ತೆಗೆ ಬಿಡದಿಯಿಂದ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಕುರಿತು ಹಿಂದೆಯೇ ಸರ್ಕಾರ ಮತ್ತು ನೈಸ್ ಸಂಸ್ಥೆ ನಡುವೆ ಒಪ್ಪಂದವಾಗಿತ್ತು. ಆದರೆ ಅನೇಕ ಕಾರಣಕ್ಕೆ ಯೋಜನೆ ಕಾಗದದಲ್ಲಿಯೇ ಉಳಿದಿತ್ತು.

ಈ ಹಿಂದಿನ ಒಪ್ಪಂದದಂತೆ ಬಿಎಂಐಸಿ ಯೋಜನೆಯಡಿ 41 ಕಿ. ಮೀ. ಫೆರಿಫೆರಲ್ ರಿಂಗ್ ರಸ್ತೆ, 9 ಕಿ. ಮೀ. ಲಿಂಕ್ ರಸ್ತೆ ಮತ್ತು 13 ಕಿ. ಮೀ. ಎಕ್ಸ್‌ಪ್ರೆಸ್ ವೇಯನ್ನು ಬಿಡದಿ ತನಕ ನಿರ್ಮಾಣ ಮಾಡಬೇಕಿತ್ತು. ಈ ಯೋಜನೆಯನ್ನು 3 ಭಾಗವಾಗಿ ವಿಭಾಗ ಮಾಡಲಾಗಿತ್ತು. ನೈಸ್ ರಸ್ತೆ ಸದ್ಯ ಫೆರಿಫೆರಲ್ ರಿಂಗ್ ರಸ್ತೆಯನ್ನು ಪೂರ್ಣಗೊಳಿಸಿದೆ.
ನೈಸ್ ಸಂಸ್ಥೆಯಿಂದ ಪತ್ರ: ಮೈಸೂರು ರಸ್ತೆಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವುದು, ಲಿಂಕ್ ರಸ್ತೆ ಮತ್ತು ಎಕ್ಸ್‌ಪ್ರೆಸ್ ವೇ ರಸ್ತೆಗಳ ನಿರ್ಮಾಣವಾಗಿಲ್ಲ. ಈ ವರ್ಷದ ಜೂನ್‌ನಲ್ಲಿ ನೈಸ್ ಸಂಸ್ಥೆ ಸರ್ಕಾರಕ್ಕೆ ಪತ್ರವನ್ನು ಬರೆದಿತ್ತು. ನೈಸ್ ಎಕ್ಸ್‌ಪ್ರೆಸ್ ವೇ ರಸ್ತೆಯನ್ನು ಹೆಮ್ಮಿಗೆಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿ 275ಕ್ಕೆ ಬಿಡದಿ ಸಮೀಪ ಲಿಂಕ್ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಿತ್ತು.
ಈ ಲಿಂಕ್ ರಸ್ತೆಯನ್ನು ಟೋಲ್ ರಸ್ತೆಯಾಗಿ ಮಾಡುವ ಮೂಲಕ ಕಂಪನಿಗೂ ಆದಾಯವನ್ನು ಸಂಗ್ರಹ ಮಾಡಲು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. ಸದ್ಯ ಇರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣಕ್ಕೆ ಬೆಂಗಳೂರು ಪೂರ್ವ, ದಕ್ಷಿಣ ಭಾಗಕ್ಕೆ ಹೋಗುವ ವಾಹನ ಸವಾರರಿಗೆ ಈ ರಸ್ತೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಆದರೆ ಈ ಪ್ರಸ್ತಾವನೆ ಜಾರಿಗೊಳ್ಳಲು ಎರಡು ಪ್ರಮುಖ ಸವಾಲುಗಳಿವೆ. ನೈಸ್ ಯೋಜನೆಯಾಗಿ ಸ್ವಾಧೀನಪಡಿಸಿಕೊಳ್ಳಲಾದ ಮತ್ತು ಯೋಜನೆಗೆ ಉಪಯೋಗ ಮಾಡಿಕೊಳ್ಳದ 13,418 ಎಕರೆ ಭೂಮಿಯನ್ನು ರೈತರಿಗೆ ವಾಪಸ್ ನೀಡುವುದು ಒಂದು ಮತ್ತು ಮೂಲ ಒಪ್ಪಂದದ ಭಾಗವಾಗಿರದ 2,351 ಎಕರೆ ಹೆಚ್ಚುವರಿ ಭೂಮಿಯನ್ನು ವಾಪಸ್ ಪಡೆಯುವುದು ಎರಡನೆಯ ಸವಾಲು.
ನೈಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಬೇಕಿದೆ. ಈಗಾಗಲೇ ನಗರಾಭಿವೃದ್ಧಿ ಇಲಾಖೆ ಈ ಕುರಿತು ವರದಿಯನ್ನು ತಯಾರು ಮಾಡಿದ್ದು, ಅದು ನೈಸ್ ಸಂಸ್ಥೆಯ ಪ್ರಸ್ತಾವನೆಯ ಪರವಾಗಿದೆ ಎಂಬ ಮಾಹಿತಿ ಇದೆ. ಬಿಡದಿಗೆ ಲಿಂಕ್ ರಸ್ತೆ ನಿರ್ಮಾಣವಾದರೆ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಸಹ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಹಲವು ವರ್ಷಗಳ ಹಿಂದೆ ಕೆಐಎಡಿಬಿ ನೈಸ್ ಸಂಸ್ಥೆಗೆ ಫೆರಿಫೆರಲ್ ರಿಂಗ್ ರೋಡ್, ಎಕ್ಸ್‌ಪ್ರೆಸ್ ವೇ, ಲಿಂಕ್ ರಸ್ತೆ ನಿರ್ಮಾಣಕ್ಕಾಗಿ 4,341 ಎಕರೆ ಭೂಮಿಯನ್ನು ಹಸ್ತಾಂತರ ಮಾಡಿತ್ತು. ಇವುಗಳಲ್ಲಿ ಬಳಕೆ ಮಾಡದೇ ಉಳಿದಿರುವ ಭೂಮಿಯನ್ನು ನೈಸ್ ಸಂಸ್ಥೆ ವಾಪಸ್ ನೀಡಿದರೆ ಈಗ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯನ್ನು ಸರ್ಕಾರ ಒಪ್ಪುವ ನಿರೀಕ್ಷೆ ಇದೆ.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಗ್ರೇಟರ್ ಬಿಡದಿ-ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಕುರಿತು ಬಹಳ ಆಸಕ್ತಿ ಹೊಂದಿದ್ದಾರೆ. ಬಿಡದಿಗೆ ಹೆಚ್ಚಿನ ಕೈಗಾರಿಕೆಗಳನ್ನು ಸೆಳೆದು ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಆದ್ದರಿಂದ ಈ ಲಿಂಕ್ ರಸ್ತೆ ಯೋಜನೆಗೆ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ.
ಸರ್ಕಾರ 8 ವರ್ಷಗಳ ಹಿಂದೆ 'ಬಿಡದಿ ಸ್ಮಾರ್ಟ್ ಸಿಟಿ ಪ್ಲಾನಿಂಗ್ ಅಥಾರಿಟಿ' ಸ್ಥಾಪನೆ ಮಾಡಿತ್ತು. ಈಗ ಕಾಂಗ್ರೆಸ್ ಸರ್ಕಾರ ಇದನ್ನು 'ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನೆ' ಎಂದು ಮರು ನಾಮಕರಣ ಮಾಡುವ ಮೂಲಕ ಬಿಡದಿಯ ಅಭಿವೃದ್ಧಿಗೆ ಮೊದಲ ಹೆಜ್ಜೆಯನ್ನು ಇಟ್ಟಿದೆ.












Click it and Unblock the Notifications