ಎಲ್ಲರಿಗೂ ದೇಶದ ಚಿಂತೆಯಾದರೆ ಯಡಿಯೂರಪ್ಪಗೆ ಸೀಟಿನ ಚಿಂತೆ:ಯು.ಟಿ.ಖಾದರ್
ಬೆಳಗಾವಿ, ಮಾರ್ಚ್ 04: ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಇದೆ. ಈ ವೇಳೆ ಎಲ್ಲರಿಗೂ ದೇಶ ಹಾಗೂ ಸೈನಿಕರ ಚಿಂತೆಯಾದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಟಿಳಕವಾಡಿಯಲ್ಲಿ ನಾಥ ಪೈ ಉದ್ಯಾನವನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ದೇಶ ಹಾಗೂ ಸೈನಿಕರ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಿರಬೇಕು. ಇಂಥಹ ವಿಷಯಗಳಲ್ಲಿ ರಾಜಕೀಯ ಮಾಡದೇ ವಿಶ್ವಕ್ಕೆ ಏಕತೆ ಸಂದೇಶ ಸಾರಬೇಕು ಎಂದರು.
ದೇಶದ ಸೈನ್ಯ ಮತ್ತು ಭದ್ರತೆ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು. ದಾಳಿ ಮತ್ತು ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೆಲವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರೇ ಈ ರೀತಿ ಮಾಡುವುದು ಎಲ್ಲರಿಗೂ ಕೂಡ ಕಪ್ಪು ಚುಕ್ಕೆ. ಎಲ್ಲರಿಗೂ ಕೂಡ ದೇಶದ ಮತ್ತು ಸೈನಿಕರ ಚಿಂತೆಯಾದರೆ ಯಡಿಯೂರಪ್ಪ ಅವರಿಗೆ ಸೀಟಿನ ಚಿಂತೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮುಂಬೈ ಸ್ಫೋಟದ ವೇಳೆ ಚಿತ್ರೀಕರಣ ನೋಡಲು ಅಲ್ಲಿನ ಮುಖ್ಯಮಂತ್ರಿಯ ಮಗ ಮತ್ತು ನಿರ್ದೇಶಕ ಹೋಗಿದ್ದಕ್ಕೆ ಅಂದು ಮುಖ್ಯಮಂತ್ರಿ ಅವರನ್ನು ಬದಲಿಸಲಾಗಿತ್ತು. ಬಹಿರಂಗವಾಗಿ ಹೇಳಿಕೆ ನೀಡಿರುವ ಬಿಎಸ್ ವೈ ವಿರುದ್ಧ ಬಿಜೆಪಿ ಹೈಕಮಾಂಡ್ ಯಾವ ಕ್ರಮ ಜರುಗಿಸಲಿದೆ ಎನ್ನುವುದನ್ನು ದೇಶಕ್ಕೆ ತೋರಿಸಲಿ ಎಂದು ಸವಾಲು ಹಾಕಿದರು.












Click it and Unblock the Notifications