ಬೆಳಗಾವಿ : ಪೊಲೀಸರಿಗೆ ಲಂಚ ಕೊಡಲು ತಾಳಿ ಮಾರಿದ ಗೃಹಿಣಿ
ಬೆಳಗಾವಿ, ಜ.24 : ಪೊಲೀಸರು ದೂರು ದಾಖಲಿಸಿಕೊಳ್ಳಲು ಲಂಚ ಕೇಳಿದಾಗ ಮಹಿಳೆ ತಾಳಿ ಮಾರಿ ಲಂಚ ನೀಡಿರುವ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಪ್ರಕರಣದ ಗಂಭೀರತೆ ಅರಿತಿರುವ ಎಸ್ಪಿ ಲಂಚ ತೆಗೆದುಕೊಂಡ ಪೊಲೀಸರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.
ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಗಂಡನ ಮನೆಯವರ ಕಿರುಕುಳ ತಾಳಲಾರದೆ ಪೊಲೀಸರಿಗೆ ದೂರು ಕೊಡಲು ಹೋದ ಮಹಿಳೆಯನ್ನು ಲಂಚ ನೀಡುವಂತೆ ಪೊಲೀಸರು ಕೇಳಿದ್ದಾರೆ. ಕೈಯಲ್ಲಿ ಹಣವಿಲ್ಲದ ಮಹಿಳೆ ಮಂಗಳ ಸೂತ್ರ ಮಾರಿ ಲಂಚ ನೀಡಿದ್ದಾರೆ. [ಲಂಚಬಾಕತನ ತಣಿಸಲು ಕಿಡ್ನಿ ಮಾರಿದ ಮಹಿಳೆ]

ಭ್ರಷ್ಟ ಪೊಲೀಸ್ ವ್ಯವಸ್ಥೆಯ ಬಗ್ಗೆ ಲಂಚ ನೀಡಿದ ಮಹಿಳೆ ಶಿಲ್ಪಾ ಪಾಟೀಲ ತಿರುಗಿಬಿದ್ದಿದ್ದು, ಪ್ರಕರಣದ ಗಂಭೀರ ಅರಿತ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಬೈಲಹೊಂಗಲ ಠಾಣೆಯ ಪೊಲೀಸರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. [ಲಂಚ ಕೊಟ್ರೆ ಕೊಂದು ಹಾಕ್ತೀನಿ: ಮುಖ್ಯಮಂತ್ರಿ]
ಘಟನೆಯ ವಿವರ : ಶಿಲ್ಪಾ ಪಾಟೀಲ ಎಂಬ ಮಹಿಳೆಯನ್ನು ಮದುವೆಯಾದ ಕೆಲವು ದಿನಗಳಲ್ಲಿಯೇ ಗಂಡನ ಮನೆಯವರು ತವರು ಮನೆಗೆ ವಾಪಸ್ ಕಳಿಸಿದ್ದರು. ಶಿಲ್ಪಾಳ ಪತಿ ಅಲ್ಲಿಗೂ ಬಂದು ಆಕೆಗೆ ಹಿಂಸೆ ನೀಡಲು ಆರಂಭಿಸಿದ ಇದರಿಂದಾಗಿ ಶಿಲ್ಪಾ ಪೊಲೀಸರಿಗೆ ದೂರು ನೀಡಲು ಮುಂದಾದರು.
ಡಿ.12ರಂದು ಬೈಲಹೊಂಗಲ ಪೊಲೀಸ್ ಠಾಣೆಗೆ ತೆರಳಿ ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಲು ಮುಂದಾದಾಗ ಕೇಸ್ ವರ್ಕರ್‌ಗಳಾದ ಬಿ. ಜಿ. ತೇಗೂರ ಹಾಗೂ ಎಫ್.ವೈ. ಮಲ್ಲೂರ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಲಂಚ ಕೊಟ್ಟರೆ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಹೇಳಿದರು.
ಕೈಯಲ್ಲಿ ಹಣವಿಲ್ಲದ ಮಹಿಳೆ ಮಾಂಗಲ್ಯವನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಅಡವಿಟ್ಟು 10 ಸಾವಿರ ರೂ. ತಂದು ಪೊಲೀಸರಿಗೆ ಕೊಟ್ಟರು. ನಂತರ ಲಂಚ ತಿಂದ ಪೊಲೀಸರ ವಿರುದ್ಧ ಉತ್ತರ ವಲಯದ ಐಜಿಪಿ ಉಮೇಶ್ ಕುಮಾರ್ ಅವರಿಗೆ ದೂರು ಸಲ್ಲಿಸಿದರು.
10 ಸಾವಿರ ರೂ. ಹಣದಲ್ಲಿ ಠಾಣೆಯ ಒಬ್ಬ ಸಿಬ್ಬಂದಿಗೆ 2,500ರೂ. ಹಾಗೂ ಇನ್ನೊಬ್ಬ ಸಿಬ್ಬಂದಿಗೆ 1,500ರೂ ಹಾಗೂ ಪಿಎಸ್‌ಐ ಸಂಜಯ ಎಸ್.ಬಳಿಗಾರ ಅವರಿಗೆ 5ಸಾವಿರ ರೂ. ನೀಡಿರುವುದಾಗಿ ಮಹಿಳೆ ಹೇಳಿದ್ದಾಳೆ. ಲಂಚ ಪಡೆಯುತ್ತಿರುವ ಫೋಟೊ ಸಹ ತಮ್ಮಲ್ಲಿ ಇದೆ ಎಂದು ಶಿಲ್ಪಾ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಪಡೆದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಆರ್.ರವಿಕಾಂತೇಗೌಡ ಅವರು ಪಿಎಸ್‌ಐ ಪಿಎಸ್‌ಐ ಸಂಜಯ ಎಸ್. ಬಳಿಗಾರ ಹಾಗೂ ಕೇಸ್‌ವರ್ಕರ್‌ಗಳಾದ ಬಿ. ಜಿ. ತೇಗೂರ ಹಾಗೂ ಎಫ್. ವೈ. ಮಲ್ಲೂರ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.












Click it and Unblock the Notifications