ಪತ್ರಕರ್ತರ ಮೇಲೆ ಎಗರಿಬಿದ್ದ ಜೆಡಿಎಸ್ ಶಾಸಕ

ಬೆಳಗಾವಿ, ಡಿ. 5 : ಕಾರ್ ಛೇಸ್ ಮಾಡಿದ್ದಕ್ಕೆ ಜನಸಾಮಾನ್ಯನಿಗೆ ಕಪಾಳಮೋಕ್ಷ ಮಾಡಿದ ಸೊಕ್ಕಿನ ಶಾಸಕರ ಬಗ್ಗೆ ಕೇಳಿದ್ದೀರಾ. ನನಗೆ ಎದ್ದು ನಿಂತು ನಮಸ್ಕಾರ ಹೇಳಲಿಲ್ಲ ಅಂತಾ ಬೇಕಾಬಿಟ್ಟಿಯಾಗಿ ವರ್ತಿಸಿದ ಶಾಸಕರನ್ನು ನೋಡಿದ್ದೀರಾ. ಆದ್ರೆ ಜಸ್ಟ್ ಒಂದು ಫೋನ್ ಕಾಲ್ ಕೇಳಿದ ಪತ್ರಕರ್ತರ ಮೇಲೆ ಎಗರಾಡಿದ ಶಾಸಕನ ವಿಷಯ ನಿಮಗೆ ಹೇಳಲೇಬೇಕು. ಹೌದು ಜೆಡಿಎಸ್ ನಾಯಕ, ಕೃಷ್ಣರಾಜನಗರ ಶಾಸಕ ಸಾ.ರಾ ಮಹೇಶ್ ಪತ್ರಕರ್ತನ ಮೇಲೆ ಹರಿಹಾಯ್ದ ಘಟನೆ ಬೆಳಗಾವಿ ಸುವರ್ಣ ವಿಧಾನಸೌಧದ ವಿರೋಧ ಪಕ್ಷದ ಗ್ಯಾಲರಿಯಲ್ಲಿ ಬುಧವಾರ ನಡೆಯಿತು.

ಶಾಸಕ ಸಾ.ರಾ ಮಹೇಶ್ ಅವರ ಫೋನ್‍ಅನ್ನ ಏನು ಕೇಳಿರಲಿಲ್ಲ ಬಿಡಿ. ಹಾಗೆ ನೋಡಿದ್ರೆ ವಿಧಾನಸಭೆಯಲ್ಲಿ ಬ್ಲೂ ಫಿಲ್ಮ್ ನೋಡಲಿಕ್ಕೂ ನಾವೇನು ಫೋನ್ ಕೇಳಿದ್ದಲ್ಲ. ನಾವು ಕೇಳಿದ್ದು ವಿಧಾನಸಭೆಯ ವಿರೋಧಪಕ್ಷದ ಗ್ಯಾಲರಿಯಲ್ಲಿರುವ ಲ್ಯಾಂಡ್ ಲೈನ್ ಫೋನ್. ಅದು ಒಂದು ಕಾಲ್ ಮಾಡಿ ಆಫೀಸ್‍ಗೆ ಬೇಗ ಸುದ್ದಿ ಕೊಡಲಿಕ್ಕೆ. ನಿಮಗೆ ಗೊತ್ತಿರಬಹುದು - ಸುವರ್ಣಸೌಧದ ವಿಧಾನಸಭೆಯಲ್ಲಿ ಮೊಬೈಲ್ ಜ್ಯಾಮರ್ ಹಾಕಿರೋದ್ರಿಂದ ಮೊಬೈಲ್ ನೆಟ್‍ವರ್ಕ್ ಸಿಗಲ್ಲ. ಫಾಸ್ಟ್ ಆಗಿ ಕಚೇರಿಗೆ ನ್ಯೂಸ್ ಮುಟ್ಟಿಸಬೇಕಂದ್ರೆ ವಿರೋಧಪಕ್ಷದ ಗ್ಯಾಲರಿಯಲ್ಲಿರುವ ಲ್ಯಾಂಡ್ ಲೈನ್ ಫೋನೇ ಗತಿ. ಆದ್ರೆ ಈ ಫೋನ್ ಬಳಸಿಕೊಳ್ಳೋಕೆ ಸಾ.ರಾ ಮಹೇಶ್ ಪತ್ರಕರ್ತರ ಮೇಲೆ ವಾಗ್ದಾಳಿ ನಡೆಸಿದ್ದು ಮಾತ್ರ ದೊಡ್ಡ ಐರನಿ.

Winter session in Belgaum : Arrogant MLA snubs journalist

ಆ ಸನ್ನಿವೇಶ ಹೀಗಿತ್ತು : ಸಭೆಯೊಳಗೆ ಎಸ್ಮಾ ವಿಧೇಯಕವನ್ನು ವಿರೋಧಿಸಿ ಜೆಡಿಎಸ್ ಶಾಸಕರು, ಇದೊಂದು ಕರಾಳ ಶಾಸನ ಅಂತ ಸಭಾತ್ಯಾಗ ಮಾಡಿದ್ರು. ಅವರದ್ದೇ ಬ್ರೇಕಿಂಗ್ ನ್ಯೂಸ್ ಕೊಡಲು ದೌಡಾಯಿಸಿದ ಪತ್ರಕರ್ತರು ವಿರೋಧ ಪಕ್ಷದ ಗ್ಯಾಲರಿಯಲ್ಲಿರುವ ಫೋನ್ ಬಳಕೆಗೆ ಮುಂದಾದ್ರು. ಅದಾಗಲೇ ಸಭೆ ಬಾಯ್ಕಾಟ್ ಮಾಡಿ ಗ್ಯಾಲರಿಗೆ ಬಂದು ಕುರ್ಚಿ ಮೇಲೆ ಆರಾಮಾಗಿ ಕುಳಿತಿದ್ದ ಸಾ.ರಾ ಮಹೇಶ್ - ಏ. ನಿನ್ನನ್ನ ಒಳಗೆ ಬಿಟ್ಟವರ್ಯಾರು ಅಂತಾ ಜೋರು ಧ್ವನಿಯಲ್ಲಿ ಪತ್ರಕರ್ತನನ್ನೇ ಗದರಿಸಿದ್ರು. [ಎಸ್ಮಾ ಕಾಯ್ದೆಗೆ ಒಪ್ಪಿಗೆ]

ಇದು ನಮ್ಮ ಗ್ಯಾಲರಿ. ಈ ಫೋನ್ ನಮ್ಮದು. ನೀನು ನಿಮ್ಮ ಗ್ಯಾಲರಿಗೆ ಹೋಗಿ (ಪತ್ರಕರ್ತರಿಗೆ ಪ್ರತ್ಯೇಕ ಗ್ಯಾಲರಿ ಇಲ್ಲ) ಏನು ಬೇಕಾದ್ರು ಮಾಡ್ಕೋ ಅಂದ್ರು. ಅದಕ್ಕೆ ಮರು ಮಾತಾಡದ ಪತ್ರಕರ್ತ, ಆಯ್ತು ಸರ್ ಅಂತ ವಾಪಸ್ ಹೋಗ್ತಾ, ಇವರು ಶಾಸಕರಾಗಿ ಹೀಗೆ ಮಾತಾಡ್ತಾರಲ್ಲ.. ಶಾರ್ಟ್ ಟೆಂಪರ್ ಏನಾದ್ರು ಇರಬಹುದಾ ಅಂತಾ ಅಲ್ಲೇ ಇದ್ದ ಒಬ್ಬ ಹಿರಿಯ ಪತ್ರಕರ್ತರಲ್ಲಿ ಮಾಹಿತಿ ಕಲೆ ಹಾಕಲು ಮುಂದಾದ್ರು. ಇದನ್ನ ನೋಡಿದ ಸಾ.ರಾ ಮಹೇಶ್, ನೀನೇನು ನನ್ನ ಬಗ್ಗೆ ಕೇಳೋದು. ನನ್ನ ಹೆಸರು ಸಾ.ರಾ ಮಹೇಶ್ ಬರಕೋ.. ಅದೇನು ಬರೀತಿಯಾ ಬರಕೋ ಹೋಗು. ನಿಮ್ಮಿಂದ ನಾವೇನು ಎಂಎಲ್‍ಎ ಆಗಬೇಕಾಗಿಲ್ಲ ಹೋಗೋ ಅಂತ ಅಕ್ಕ ಪಕ್ಕ ಕುಳಿತಿದ್ದ ಶಾಸಕರನ್ನ ನೋಡ್ತಾ ತಮ್ಮ ಗತ್ತು ಗೊಡ್ಡು ಪ್ರತಿಷ್ಠೆ ತೋರಿಸಿದ್ರು.

ಇದಕ್ಕೆ ನಯವಾಗಿಯೇ ಉತ್ತರಿಸಿದ ಪತ್ರಕರ್ತ. ಸರ್ ಖಂಡಿತವಾಗಿಯೂ ನಿಮ್ಮ ಹೆಸರು ಬರೆದುಕೊಳ್ಳುವ ಅವಶ್ಯಕತೆ ಇಲ್ಲ. ಒಳ್ಳೆಯ ರೀತಿಯಲ್ಲಿ ಅಲ್ಲದಿದ್ರೂ ನೆನಪಿರ್ತೀರಾ ಬಿಡಿ ಸರ್. ಜಸ್ಟ್ ಒಂದು ಫೋನ್ ಕಾಲ್ ಕೇಳಿದ್ದಕ್ಕೆ ನೀವು ಇಷ್ಟೆಲ್ಲಾ ಮಾತಾಡ್ತೀರಾ ಅಂದ್ಮೆಲೆ, ನಿಮ್ಮನ್ನ ಮರೆಯೋದಾದ್ರು ಹೇಗೆ ಅಂತ ಉತ್ತರಿಸಿದ. ಈ ಮಾತು ಕೇಳಿದ ಸಾ.ರಾ ಮಹೇಶ್ ಏನಂದುಕೊಂಡ್ರೋ ಗೊತ್ತಿಲ್ಲ. ಶಾಸಕ ಅನ್ನೋ ಅಧಿಕಾರದ ಅಮಲಲ್ಲಿದ್ದವರಿಗೆ ಬಹುತೇಕ ನಾನೂ ಕೂಡಾ ನೆನಪಿಟ್ಟುಕೊಳ್ಳುವಂಥ ಅದ್ಭುತ ಸಾಧನೆ ಮಾಡಿದ್ದೇನೆ ಅಂತ ಅನಿಸಿದ್ರು ಆಶ್ಚರ್ಯವೇನಿಲ್ಲ. ಆದ್ರೆ ಅವರ ಅಕ್ಕ ಪಕ್ಕ ಕುಳಿತ ಶಾಸಕರಿಗೆ ಮಾತ್ರ ಪತ್ರಕರ್ತನ ಮಾತಿನ ಮರ್ಮ ಚೆನ್ನಾಗಿಯೇ ಅರ್ಥ ಆಯ್ತು. ಇನ್ನೇನು ಸಾ.ರಾ ಮಹೇಶ್ ಸಿಟ್ಟಿಗೇಳ್ತಾರೆ ಅಂತಿದ್ದ ಹಾಗೇ ಪಕ್ಕದಲ್ಲಿದ್ದ ಶಾಸಕರೇ ಹೋಗ್ಲಿ ಬಿಡಿ ಅಂತ ಪತ್ರಕರ್ತನಿಗೆ ಸಮಾಧಾನ ಹೇಳಿದ್ರು.

ಶಾಸಕರಿಗೆ ಸೌಲಭ್ಯ, ಸವಲತ್ತುಗಳು ಅಗತ್ಯ. ಆದ್ರೆ, ವಿಧಾನಸೌಧ ಅಂದ್ರೆ ನಮ್ಮಪ್ಪನ ಮನೆ ಅನ್ನೋ ರೀತಿಯಲ್ಲಿ ವರ್ತಿಸುವ ಇಂತಹ ಶಾಸಕರಿಗೆ ಏನು ಹೇಳಬೇಕು ನೀವೇ ಹೇಳಿ? ಸುವರ್ಣಸೌಧ ಕಟ್ಟಿದ್ದು ನಿಮ್ಮ ಅಥವಾ ಯಾವುದೇ ಓರ್ವ ವ್ಯಕ್ತಿಯ ಮನೆ ದುಡ್ಡಿಂದ ಅಲ್ಲ ಸರ್. ಅದು ಜನರ ತೆರಿಗೆ ಹಣದಿಂದ ಅನ್ನೋದನ್ನ ಮರೆಯಬೇಡಿ. ನಿಮ್ಮನ್ನ ಜನರು ಆಯ್ಕೆ ಮಾಡಿ ವಿಧಾನಸಭೆಗೆ ಕಳಿಸಿದ್ದು ಶಾಸನ ರಚನೆ ಮಾಡಿ, ನಮ್ಮ ಪರವಾಗಿ ಧ್ವನಿಯಾಗಿ ಕೆಲಸ ಮಾಡಿ ಅಂತ. ಅದು ಬಿಟ್ಟು ಸಭೆ ಬಾಯ್ಕಾಟ್ ಮಾಡಿ ಗ್ಯಾಲರಿಯಲ್ಲಿ ಕುಳಿತು ಫೋನ್ ನಲ್ಲಿ ಹರಟೆ ಹೊಡಿಯಲಿಕ್ಕೆ ಅಲ್ಲ. ಏನೇ ಇರಲಿ ಒಂದಂತೂ ಸತ್ಯ. ಈ ವಿಷಯ ಕೇಳಿದವರೆಲ್ಲಾ ಸಾ.ರಾ ಮಹೇಶ್ ಅವರಿಗೆ ಶಾರ್ಟ್ ಟೆಂಪರ್ ಬಿಡ್ರಿ ಅಂತಾ ಹೇಳ್ತಾಯಿದ್ರು.

ಪತ್ರಕರ್ತನ ಮೇಲೆ ತನ್ನ ಪ್ರತಾಪ ತೋರಿಸಿರುವ ಜೆಡಿಎಸ್ ನಾಯಕ ಮೈಸೂರಿನ ಕೃಷ್ಣರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡಸ್ವಾಮಿ ಗೌಡ ಅವರನ್ನು ಕೇವಲ 6 ಸಾವಿರ ಮತಗಳಿಂದ ಸೋಲಿಸಿದ್ದರು. ಇವರನ್ನು ಗೆಲ್ಲಿಸಿರುವ ಕೃಷ್ಣರಾಜನಗರದ ಮತದಾರರು ಇವರ ದರ್ಪ ನೋಡಿ ಈಗ ಏನೆಂದುಕೊಳ್ಳುತ್ತಿದ್ದಾರೋ ಏನೋ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+