'ಜಗತ್ತಿನ ಮುಸ್ಲಿಂ ದೇಶಗಳು ಭಾರತಕ್ಕೆ ನಿರ್ಬಂಧ ಹಾಕಿದರೆ ಏನಾಗಬಹುದು'
ಬೆಳಗಾವಿ, ಮಾರ್ಚ್ 27: ನಮ್ಮ ರಾಜ್ಯದ ರಾಜಕಾರಣಿಗಳು ಮೇಲಾಟದಲ್ಲಿ ನಿರತರಾಗಿದ್ದಾರೆ, ಒಬ್ಬರು ಕುಡುಕ ಎಂದರೆ ಇನ್ನೊಬ್ಬರು ಕಳ್ಳ ಎಂದು ಹೇಳುತ್ತಿದ್ದಾರೆ. ರಾಜ್ಯದ ಪ್ರತಿಷ್ಠಿತ ನಾಯಕರು ಮಾತನಾಡುವ ರೀತಿಯಾ ಇದು? ಚುನಾವಣೆಯ ಸಮಯದಲ್ಲಿ ರಾಜ್ಯದ ಜನತೆಗೆ ಏನು ಸಂದೇಶ ನೀಡಿದಂತಾಗಿದೆ"ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತ ಪಡಿಸಿದರು.
Recommended Video
"ಮುಂಬರುವ ಚುನಾವಣೆ ಹೊಸ ಕ್ರಾಂತಿಗೆ ನಾಂದಿಯಾಗಬೇಕು, ಮೂರೂ ಪಕ್ಷದ ಪ್ರಮುಖ ನಾಯಕರು, ಯಾವುದೇ ಆಮಿಶಕ್ಕೆ ಒಳಗಾಗದೆ ಮತ ಚಲಾಯಿಸಿ ಎಂದು ಮತದಾರರಿಗೆ ಸೂಚಿಸಲಿ. ಇದು ಸಾಧ್ಯವೇ"ಎಂದು ಎಚ್. ವಿಶ್ವನಾಥ್ ಪ್ರಶ್ನಿಸಿದರು.
"ಹಿಜಾಬ್ ಮತ್ತು ವ್ಯಾಪಾರದ ಸ್ಥಳದಲ್ಲಿ ಧರ್ಮ ಇದು ಸರಿಯಲ್ಲ, ರಾಜ್ಯ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎನ್ನುವ ಭಯ ಆಗುತ್ತಿದೆ. ನಾವೆಲ್ಲಾ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಈಗ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದಂತೆ, ಮುಸ್ಲಿಂ ರಾಷ್ಟ್ರಗಳು ಭಾರತದ ಮೇಲೆ ನಿಷೇಧ ಹೇರಿದರೆ ಏನಾಗುತ್ತದೆ ಎನ್ನುವ ಕಲ್ಪನೆ ಬೇಡವೇ"ಎಂದು ವಿಶ್ವನಾಥ್ ಆತಂಕ ಹೊರಹಾಕಿದ್ದಾರೆ.

"ಮುಸ್ಲಿಂ ವ್ಯಾಪಾರಿಗಳ ಮೇಲೆ ನಿರ್ಬಂಧ ಹೇರಬಾರದು, ಪಾಪ ಅವರು ಹೊಟ್ಟೆಗೆ ಏನು ಮಾಡುತ್ತಾರೆ. ಪಂಚರ್ ಹಾಕುವವನು, ತಗಡು ಬಡಿಯುವವನು, ಗುಜರಿಯಲ್ಲಿ ಕೆಲಸ ಮಾಡುವವನು ಯಾರು? ಇದೊಂದು ಅಮಾನವೀಯ ಕೆಲಸ, ಇದನ್ನು ಯಾರೂ ಒಪ್ಪುವುದಿಲ್ಲ"ಎಂದು ಎಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು.
ಗೋಕಾಕ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಶ್ವನಾಥ್, "ಬೇರೆ ಬೇರೆ ದೇಶಗಳಲ್ಲಿ ನಮ್ಮ ದೇಶದವರು ನೆಲೆಸಿದ್ದಾರೆ. ಒಂದು ವೇಳೆ, ಮುಸ್ಲಿಂ ರಾಷ್ಟ್ರಗಳು ಭಾರತೀಯರು ಅಲ್ಲಿ ಇರಬಾರದು ಎಂದು ತೀರ್ಮಾನ ತೆಗೆದುಕೊಂಡರೆ ನಮ್ಮವರ ಗತಿ ಏನಾಗಬಹುದು" ಎಂದು ವಿಶ್ವನಾಥ್ ಹೇಳಿದರು.
"ಒಂದು ವೇಳೆ ಮುಸ್ಲಿಂ ದೇಶಗಳು ಆ ನಿರ್ಧಾರ ತೆಗೆದುಕೊಂಡರೆ ಅಲ್ಲಿಯ ಭಾರತೀಯರು ಎಲ್ಲಿಗೆ ಹೋಗುವುದು, ಇಂತಹ ಹುಚ್ಚಾಟ ಸರಿಯಲ್ಲ. ಈ ರೀತಿ ಮಾಡಿ ಎಂದು ಯಾವ ಧರ್ಮ, ದೇವರು ಹೇಳಿದ್ದಾರೆ. ಸರಕಾರದ ಮೌನ ಈ ವಿಚಾರದಲ್ಲಿ ಸರಿಯಲ್ಲ. ಸರ್ಕಾರ ಈ ಬಗ್ಗೆ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಭಾರತದಲ್ಲೇ ಉಳಿದ ಮುಸ್ಲಿಂ ಸಮುದಾಯದವರು ಭಾರತೀಯರು. ಪಾಕಿಸ್ತಾನದವರು ಅಲ್ಲ" ಎಂದು ವಿಶ್ವನಾಥ್ ಹೇಳಿದರು.












Click it and Unblock the Notifications