Hidkal Dam: ಬರಿದಾಗುತ್ತಿದೆ ಬೆಳಗಾವಿಯ ಜೀವನಾಡಿ ಹಿಡಕಲ್ ಜಲಾಶಯ, ಉಳಿದಿರೋ ನೀರೆಷ್ಟು?
ಬೆಳಗಾವಿ, ಮಾರ್ಚ್. 03: ರಾಜ್ಯದಲ್ಲಿ ಭೀಕರ ಬರಗಾಲ ಬರುವ ಮುನ್ಸೂಚನೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ನೀರಿನ ಕ್ಷಾಮ ತಲೆದೋರಿದೆ. ಪಶ್ಚಿಮ ಘಟ್ಟಗಳ ಜಿಲ್ಲೆಗಳು, ಉತ್ತರ ಕರ್ನಾಟಕ ಭಾಗಗಳಲ್ಲಿಯೂ ನೀರಿಗೆ ಹಾಹಾಕಾರ ಉಂಟಾಗಿದ್ದು, ಇದಕ್ಕೆ ಬರೆ ಎಳೆಯುವಂತೆ ಡ್ಯಾಂಗಳಲ್ಲಿ ನೀರಿನ ಮಟ್ಟ ದಿನ ದಿನಕ್ಎಕ ಕುಸಿಯುತ್ತಿದೆ!.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಗ್ರಾಮದಲ್ಲಿರುವ ರಾಜಾ ಲಖಮಗೌಡ ಅಣೆಕಟ್ಟು ಅಥವಾ ಹಿಡಕಲ್ ಡ್ಯಾಂ ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಜನರ ಜೀವನಾಡಿ. ಆದರೆ, ಈ ಜಲಾಶಯದಲ್ಲಿಯೂ ಈ ವರ್ಷ ನೀರು ದಿನ ದಿನಕ್ಕೆ ಕಡಿಮೆಯಾಗುತ್ತಿದ್ದು, ಈ ಜಿಲ್ಲೆಗಳಲ್ಲಿ ಜಲಕ್ಷಾಮದ ಆತಂತಕ್ಕೆ ಎಡೆ ಮಾಡಿಕೊಡುತ್ತಿದೆ.ಹಿ ಡಕಲ್ ಜಲಾಶಯದಿಂದ ಬೆಳಗಾವಿ ನಗರ ಮಾತ್ರವಲ್ಲದೆ ಹುಕ್ಕೇರಿ, ಸಂಕೇಶ್ವರ ಪಟ್ಟಣಗಳು ಮತ್ತು ಮಾರ್ಗದ ನಡುವಿನ ವಿವಿಧ ಗ್ರಾಮೀಣ ಪ್ರದೇಶಗಳಿಗೂ ನೀರು ಪೂರೈಕೆಯಾಗುತ್ತದೆ. ನೀರು ಬರಿದಾಗುತ್ತಿದ್ದು, ಜನರಲ್ಲಿ ಆತಂಕ ಎದುರಾಗಿದೆ.

ಕೃಷ್ಣಾ ನದಿಯ ಜಲಾನಯ ಪ್ರದೇಶಕ್ಕೆ ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರಾಜಾ ಲಖಮಗೌಡ ಅಣೆಕಟ್ಟು ಅಥವಾ ಹಿಡಕಲ್ ಡ್ಯಾಂ 62.48 ಮೀಟರ್ ಎತ್ತರ ಹೊಂದಿದೆ. ಒಟ್ಟು ಮೇಲ್ಮೈ ವಿಸ್ತೀರ್ಣ 63.38 ಚದರ ಕಿಲೋಮೀಟರ್ ಮತ್ತು 51.16 ಟಿಎಂಸಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಈ ಅಣೆಕಟ್ಟು 8,20,000 ಎಕರೆಗೂ ಹೆಚ್ಚು ನೀರಾವರಿ ಪ್ರದೇಶಗಳಿಗೆ ನೀರು ಒದಗಿಸುತ್ತಿದೆ. ಈ ಜಲಾಶಯದಲ್ಲಿ ನೀರು ಬರಿದಾದರೇ ಇಷ್ಟು ನೀರಾವತಿ ಪ್ರದೇಶಗಳ ಜೊತೆಗೆ ಜನ ಕುಡಿಯುವ ನೀರಿಗಾಗಿ ಪರದಾಡಬೇಕು.
ಒಟ್ಟು 51.16 ಟಿಎಂಸಿ ಸಾಮರ್ಥ್ಯದ ಹಿಡಕಲ್ ಡ್ಯಾಂನಲ್ಲಿ ಈ ಉಳಿದಿರುವ ಕೇವಲ 25 ಟಿಎಂಸಿ ಮಾತ್ರ. ಅದು ಕೂಡ ಕಡಿಮೆಯಾಗುವಂತಿದೆ. ಇದೇ ಕಾರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ನೀರು ಮತ್ತು ಮೇವಿನ ಸ್ಥಿತಿಗತಿ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಹತೋಟಿಯಲ್ಲಿದೆ: ಸಚಿವ ಕೃಷ್ಣ ಬೈರೇಗೌಡ
ಇನ್ನು, ರಾಜ್ಯದಲ್ಲಿ ಬರ ಪರಿಸ್ಥಿತಿ ಹತೋಟಿಯಲ್ಲಿದ್ದು, ಮುಂದಿನ ಬೇಸಿಗೆಗೆ ರಾಜ್ಯದ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಉದ್ಭವಿಸದಂತೆ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ 7108 ಬಾಡಿಗೆ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು.

"ರಾಜ್ಯದಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಕಂಡುಬಂದಿರುವ 116 ಗ್ರಾಮಗಳಿಗೆ 175 ಟ್ಯಾಂಕರ್ ಮೂಲಕ ಹಾಗೂ 382 ಗ್ರಾಮಗಳಿಗೆ 445 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಪ್ರತಿ ದಿನ ನೀರು ಪೂರೈಸಲಾಗುತ್ತಿದೆ. 09 ನಗರ ಸ್ಥಳೀಯ ಸಂಸ್ಥೆಗಳಲ್ಲಿನ 57 ವಾರ್ಡ್‌ಗಳಿಗೆ 24 ಟ್ಯಾಂಕರ್‌ಗಳ ಮೂಲಕ ಹಾಗೂ 29 ವಾರ್ಡ್‌ಗಳಿಗೆ 17 ಖಾಸಗಿ ಬೋರ್‌ವೆಲ್‌ಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ. ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ 7377 ಗ್ರಾಮಗಳನ್ನು ಹಾಗೂ 1272 ವಾರ್ಡ್‌ಗಳನ್ನು ಗುರುತಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಒಟ್ಟು 7080 ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ." ಎಂದು ಮಾಹಿತಿ ನೀಡಿದ್ದರು.
"ರಾಜ್ಯದಲ್ಲಿ 144 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 27 ವಾರಗಳ ಬಳಕೆಗೆ ಸಾಕಾಗುತ್ತದೆ. ಅಲ್ಲದೆ, 25 ಜಿಲ್ಲೆಗಳಲ್ಲಿ ಮೇವು ಖರೀದಿಗೆ ಟೆಂಡರ್ ಕರೆಯಲಾಗಿದೆ. ಅವಶ್ಯಕತೆ ಬಂದ ಕೂಡಲೇ ಮೇವಿನ ದಾಸ್ತಾನನ್ನು ಪೂರೈಸಲಾಗುವುದು" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದರು.












Click it and Unblock the Notifications