vande bharat; ಧಾರವಾಡ-ಬೆಳಗಾವಿ ನಡುವೆ ಪ್ರಾಯೋಗಿಕ ಸಂಚಾರ?
ಬೆಳಗಾವಿ, ನವೆಂಬರ್ 06: ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಜೋರಾಗಿ ಕೇಳಿ ಬರುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದಾರೆ.
ಮುಖ್ಯಮಂತ್ರಿಗಳು ಪತ್ರದಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಳಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕಿದೆ.

ಬೆಳಗಾವಿಗೆ ವಂದೇ ಭಾರತ್ ರೈಲಿಗೆ ಇರುವ ಬೇಡಿಕೆ ಗಮನಿಸಿರುವ ನೈಋತ್ಯ ರೈಲ್ವೆ ಧಾರವಾಡ-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲು ಮುಂದಾಗಿದೆ ಎಂಬ ಮಾಹಿತಿ ಇದೆ. ಆದರೆ ಈ ಕುರಿತು ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ.
ನೇರ ರೈಲು ಮಾರ್ಗವಿಲ್ಲ; ಧಾರವಾಡ ಮತ್ತು ಬೆಳಗಾವಿ ನಡುವೆ ವಂದೇ ಭಾರತ್ ರೈಲು ಓಡಿಸಲು ಹಲವು ಸವಾಲುಗಳಿವೆ. ಮೊದಲನೆಯದಾಗಿ ಉಭಯ ನಗರಗಳ ನಡುವೆ ನೇರ ರೈಲು ಮಾರ್ಗವಿಲ್ಲ. ರೈಲ್ವೆ ಸಚಿವಾಲಯ ನೇರ ರೈಲು ಮಾರ್ಗ ಯೋಜನೆಗೆ ಅನುಮೋದನೆ ನೀಡಿದೆ. ಆದರೆ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ.
ಧಾರವಾಡ-ಬೆಳಗಾವಿ ನಡುವಿನ ರಸ್ತೆ ಮಾರ್ಗದ ದೂರ ಸುಮಾರು 80 ಕಿ. ಮೀ. ಆಗಿದೆ. ರೈಲು ಮಾರ್ಗದ ಮೂಲಕ ಸಾಗಲು ಸುಮಾರು 120 ಕಿ. ಮೀ. ಸಂಚಾರ ನಡೆಸಬೇಕಿದೆ. ಒಂದು ಟ್ರಿಪ್ ಸಂಚಾರಕ್ಕೆ ಸುಮಾರು 2 ಗಂಟೆ ಬೇಕು ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿನಲ್ಲಿ ಬೆಳಗಾವಿಯ ಕಡೆ ಸಾಗುವ ಅನೇಕ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಅವರು ಹುಬ್ಬಳ್ಳಿ, ಧಾರವಾಡದಿಂದ ರಸ್ತೆ ಮೂಲಕ ಬೆಳಗಾವಿಗೆ ಸಂಚಾರ ನಡೆಸುತ್ತಿದ್ದಾರೆ. ಬೆಳಗಾವಿ ತಲುಪಲು ವಂದೇ ಭಾರತ್ ರೈಲಿನಲ್ಲಿ ಇನ್ನೂ ಎರಡು ಗಂಟೆ ಜನರು ಸಂಚಾರ ನಡೆಸಲು ಇಷ್ಟಪಡುತ್ತಾರೆಯೇ? ಎಂದು ರೈಲ್ವೆ ಇಲಾಖೆ ಪರಿಶೀಲನೆ ನಡೆಸಬೇಕಿದೆ.
ವಂದೇ ಭಾರತ್ ರೈಲು ಒಮ್ಮೆ ನಿಲ್ದಾಣ ತಲುಪಿದ ಕೂಡಲೇ ಅದನ್ನು ಪರಿಶೀಲನೆ ನಡೆಸಬೇಕಿದೆ. ವಿದ್ಯುತ್ ಸಂಪರ್ಕ, ಸ್ವಚ್ಛತೆ ಸೇರಿದಂತೆ ಬೋಗಿಗಳ ನಿರ್ವಹಣೆಗೆ ಸುಮಾರು 4 ಗಂಟೆ ಬೇಕು ಎಂದು ಅಂದಾಜಿಸಲಾಗಿದೆ. ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ರೈಲು ಒಂದು ಟ್ರಿಪ್ ಸಂಚಾರ ನಡೆಸಲು ಸುಮಾರು 7 ರಿಂದ 9 ಗಂಟೆ ಬೇಕು ಎಂದು ಅಂದಾಜಿಸಲಾಗಿದೆ.
ಬೆಂಗಳೂರು-ಧಾರವಾಡ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಇದೆ. ಬೆಂಗಳೂರು-ಧಾರವಾಡ ಮಾರ್ಗದಲ್ಲಿ ಶೇ 65ರಷ್ಟು ಮತ್ತು ಧಾರವಾಡ-ಬೆಂಗಳೂರು ಮಾರ್ಗದಲ್ಲಿ ಶೇ 85ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಈ ಸೇವೆ ವಿಸ್ತರಣೆ ಮಾಡಿದರೆ ಆಗುವ ಅನುಕೂಲಗಳ ಕುರಿತು ಇಲಾಖೆ ಚಿಂತನೆ ನಡೆಸುತ್ತಿದೆ.
ಕೆಲವು ಮರಾಠಿ ವೆಬ್‌ಸೈಟ್‌ಗಳು ನವೆಂಬರ್ 8, 9ರಂದು ಧಾರವಾಡ-ಬೆಳಗಾವಿ ನಡುವೆ ವಂದೇ ಭಾರತ್ ರೈಲಿನ ಪ್ರಾಯೋಗಕ ಸಂಚಾರ ನಡೆಸಲಾಗುತ್ತದೆ ಎಂದು ಹೇಳಿವೆ. ಆದರೆ ನೈಋತ್ಯ ರೈಲ್ವೆ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿದರೆ ಬೆಳಗಾವಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ರೈಲ್ವೆ ಸಚಿವರಿಗೆ ವಿವರಣೆ ಕೊಟ್ಟಿದ್ದಾರೆ.
ರೈಲು ಸೇವೆ ಬೆಳಗಾವಿ ಜಿಲ್ಲೆಯ ತನಕ ವಿಸ್ತರಣೆಯಾದರೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಉತ್ತಮ ಸಂಪರ್ಕ ಕಲ್ಪಿಸಲು ಅನುಕೂಲವಾಗಲಿದೆ. ಆದ್ದರಿಂದ ರೈಲ್ವೆ ಸಚಿವಾಲಯ ಈ ಕುರಿತು ಗಮನ ಹರಿಸಬೇಕು ಎಂದು ಪತ್ರದಲ್ಲಿ ಮನವಿಯನ್ನು ಮಾಡಿದ್ದಾರೆ.












Click it and Unblock the Notifications