Vande Bharat Train: ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು, ಬೆಳಗಾವಿ ಜನರ ಅಸಮಾಧಾನ
ಬೆಳಗಾವಿ, ಸೆಪ್ಟೆಂಬರ್ 09: ಕರ್ನಾಟಕದಲ್ಲಿ ಮತ್ತೊಂದು ವಂದೇ ಭಾರತ್ ರೈಲಿನ ಸಂಚಾರ ಸೆಪ್ಟೆಂಬರ್ 15ರಿಂದ ಆರಂಭವಾಗುವ ನಿರೀಕ್ಷೆ ಇದೆ. ಹುಬ್ಬಳ್ಳಿ ಮತ್ತು ಪುಣೆ ನಡುವೆ ಸಂಪರ್ಕ ಕಲ್ಪಿಸುವ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಆದರೆ ಈ ರೈಲು ಸೇವೆ ಗಡಿನಾಡು ಬೆಳಗಾವಿ ಜನರ ಕಣ್ಣು ಕೆಂಪಾಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ರೈಲ್ವೆ ಇಲಾಖೆಯ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿಗೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬುದು ಹಳೆಯ ಬೇಡಿಕೆ. ಹುಬ್ಬಳ್ಳಿ ಮತ್ತು ಪುಣೆ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ರೈಲು ಬೆಳಗಾವಿಯಲ್ಲಿ ನಿಲುಗಡೆಯನ್ನು ಹೊಂದಿದೆ. ಆದರೆ ಇದರಿಂದಾಗಿ ಬೆಳಗಾವಿ ಜನರು ಸಂತಸಗೊಂಡಿಲ್ಲ, ಆಕ್ರೋಶಗೊಂಡಿದ್ದಾರೆ.

ಜನರ ಅಸಮಾಧಾವ ಏಕೆ?: ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ಬಿಳಿ ಬಣ್ಣದ ವಂದೇ ಭಾರತ್ ರೈಲು ವಯಾ ಹುಬ್ಬಳ್ಳಿ ಸಂಚಾರವನ್ನು ನಡೆಸುತ್ತಿದೆ. ಈ ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದರೂ ಸಹ ರೈಲು ಸಂಚಾರ ಆರಂಭವಾಗಿಲ್ಲ. ಆದ್ದರಿಂದ ಜನರು ಆಕ್ರೋಶಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಜೂನ್ 27, 2023ರಂದು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆಯನ್ನು ನೀಡಿದ್ದರು. ರೈಲು ನಂಬರ್ 20661/ 20662 ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು.
ಬೆಂಗಳೂರು-ಬೆಳಗಾವಿ ವಂದೇ ಭಾರತ ರೈಲು ಬಿಡಲು ತಾಂತ್ರಿಕ ಕಾರಣ ಅಂದ ಮೇಲೆ ಹುಬ್ಬಳ್ಳಿ- ಪುಣೆ ರೈಲು ಬಿಡಲು ಯಾವ ತಾಂತ್ರಿಕ ಸಮಸ್ಯೆ ಯಾಕೆ ಇಲ್ಲ..ಎಲ್ಲಾ ರಾಜಕೀಯ. ಮಕ್ಕಳ ಮೇಲೆ ಪ್ರೀತಿಗಿಂತ ಮಂದಿ ಮಕ್ಕಳ ಮೇಲೆ ಪ್ರೀತಿ ಜಾಸ್ತಿ@VSOMANNA_BJP @TumakuruRailway @rohitsre @ccmsrly @drmubl @drmsbc @rohitsre @Irannakadadi_MP pic.twitter.com/UHddGeiGnI
— South Western Railways Passengers Committee(SWRPC) (@NammaRailways) September 9, 2024
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳ ಒತ್ತಾಯಕ್ಕೆ ರೈಲ್ವೆ ಇಲಾಖೆ ಮಣಿಯಿತು. ರೈಲು ಸೇವೆಯನ್ನು ಬೆಳಗಾವಿಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿತು. 2024ರ ನವೆಂಬರ್‌ನಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ಪ್ರಾಯೋಗಿಕ ಸಂಚಾರವೂ ಸಹ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಆದರೆ ಇನ್ನೂ ಸಹ ರೈಲು ಸೇವೆ ವಿಸ್ತರಣೆಯಾಗಿಲ್ಲ.
ಪ್ರಾಯೋಗಿಕ ಸಂಚಾರದ ಸಮಯದಲ್ಲಿ ಬೆಳಗಾವಿಯಲ್ಲಿ ವಂದೇ ಭಾರತ್ ರೈಲು ನಿರ್ವಹಣೆ ಮಾಡಲು ಕೆಲವು ಸೌಕರ್ಯಗಳ ಅಗತ್ಯವಿದೆ ಎಂದು ಗಮನಿಸಲಾಗಿತ್ತು. ಈಗ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದರೂ ಸಹ ರೈಲು ಸೇವೆ ವಿಸ್ತರಣೆ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿಗೆ ಹೋಗುವ ಜನರು ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲಿನಲ್ಲಿ ಸಂಚಾರ ನಡೆಸಿದರೆ ಹುಬ್ಬಳ್ಳಿ ಅಥವ ಧಾರವಾಡದಲ್ಲಿ ಇಳಿದು ಬಸ್ ಅಥವ ಖಾಸಗಿ ವಾಹನವನ್ನು ಏರಿ ಬೆಳಗಾವಿ ತಲುಪಬೇಕಿದೆ. ರೈಲು ಬೆಳಗಾವಿ ತನಕ ವಿಸ್ತರಣೆ ಆದರೆ ಜನರಿಗೂ ಅನುಕೂಲವಾಗಲಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಆದರೆ ಇಂದಿಗೂ ಸಹ ಬೆಂಗಳೂರು-ಧಾರವಾಡ ತನಕ ಮಾತ್ರ ರೈಲು ಓಡುತ್ತಿದೆ. ಇಂತಹ ಸಮಯದಲ್ಲಿಯೇ ಹುಬ್ಬಳ್ಳಿ-ಪುಣೆ ರೈಲು ಘೋಷಣೆ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲಿಗೆ ಆಗಸ್ಟ್ ತಿಂಗಳಿನಲ್ಲಿ ತುಮಕೂರಿನಲ್ಲಿ ನಿಲುಗಡೆಯನ್ನು ನೀಡಲಾಗಿದೆ. ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಸೇವೆಗೆ ಚಾಲನೆ ನೀಡಿದ್ದಾರೆ. ಈಗ ರೈಲಿಗೆ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ನಿಲುಗಡೆ ಇದೆ. ಆದರೆ ಈ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡುವುದು ಯಾವಾಗ? ಎಂಬುದು ಬೆಳಗಾವಿ ಜನರ ಪ್ರಶ್ನೆಯಾಗಿದೆ.












Click it and Unblock the Notifications