ಬೆಳಗಾವಿ ಅಧಿವೇಶನದ ಮೇಲೆ ನೂರಾರು ಆಶಯಗಳು!
ಬೆಳಗಾವಿ, ನ.23 : ಬೆಳಗಾವಿಯ ಸುವರ್ಣ ವಿಧಾನಸೌಧ ಕಟ್ಟಡ ತನ್ನ ಎರಡನೇ ಅಧಿವೇಶನ ಮತ್ತು ಕಾಂಗ್ರೆಸ್ ಸರ್ಕಾರದ ಚಳಿಗಾಲದ ಚೊಚ್ಚಲ ಅಧಿವೇಶನಕ್ಕೆ ಸಜ್ಜಾಗಿ ನಿಂತಿದೆ. ಕೆಳದ ಬಾರಿ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನ ರಾಜಕೀಯ ಅಸ್ಥಿರತೆ ಮತ್ತು ಕಾವೇರಿ ಸಮಸ್ಯೆಯಿಂದಾಗಿ ಕಾಟಾಚಾರಕ್ಕೆ ಎಂಬಂತೆ ಪೂರ್ಣಗೊಂಡಿತ್ತು. ಈ ಬಾರಿಯ ಅಧಿವೇಶನವಾದರೂ ಉತ್ತರ ಕರ್ನಾಟಕದ ಜನರ ಸಮಸ್ಯೆ ಬಗೆಹರಿಸುತ್ತದೆಯೇ ಕಾದು ನೋಡಬೇಕು.
ನ.25ರ ಸೋಮವಾರದಿಂದ ನಡೆಯಲಿರುವ ಚಳಿಗಾಲದ ಅಧಿವೇಶನ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಬೆಳಗಾವಿಯಲ್ಲಿ ನಡೆದ ಕಳೆದ ಅಧಿವೇಶನದ ಸಂದರ್ಭದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಈ ಬಾರಿ ಆಡಳಿತ ಪಕ್ಷದ ನಾಯಕರಾಗಿದ್ದರೆ, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಮತ್ತು ಜಗದೀಶ್ ಶೆಟ್ಟರ್ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ.
ಧರ್ಮಸಿಂಗ್, ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಕೂಸಾಗಿದ್ದ ಸುವರ್ಣ ವಿಧಾನಸೌಧ ಕಟ್ಟಡವನ್ನು ಸುಮಾರು 500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಉತ್ತರ ಕರ್ನಾಟಕದ ಭಾಗದ ಜನರ ಸಮಸ್ಯೆ ಬಗೆಹರಿಸಲು ನಿರ್ಮಿಸಿದ ಸುವರ್ಣವಿಧಾನಸೌಧ ಕಟ್ಟಡವನ್ನು ನಿರ್ವಹಣೆ ಮಾಡುವುದೇ ಸರ್ಕಾರಕ್ಕೆ ಸಮಸ್ಯೆಯಾಗಿದೆ.
2012ರ ಅ.11 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರ್ನಾಟಕದ ಹೆಮ್ಮೆಯ ಸುವರ್ಣ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿದರು. ನಂತರ ಡಿ.5ರಿಂದ 10 ದಿನಗಳ ಕಾಲ ಸಿಎಂ ಜಗದೀಶ್ ಶೆಟ್ಟರ್, ಸುವರ್ಣ ವಿಧಾನಸೌಧದಲ್ಲಿ ಚೊಚ್ಚಲ ಅಧಿವೇಶನ ನಡೆಸಿದರು. ಸದ್ಯ ಎರಡನೇ ಅಧಿವೇಶನಕ್ಕೆ ಬೆಳಗಾವಿ ಸಜ್ಜಾಗಿದೆ. (ಸುವರ್ಣ ವಿಧಾನ ಸೌಧದ ಉದ್ದೇಶ ಈಡೇರುತ್ತದೆಯೇ)

ಮೂವರು ಮುಖ್ಯಮಂತ್ರಿಗಳ ಕನಸು
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಡ ನಿರ್ಮಿಸುವ ಕನಸು ಮೊಳಕೆಯೊಡೆದಿದ್ದು ಧರ್ಮಸಿಂಗ್ ಸಿಎಂ ಆಗಿದ್ದ ಅವಧಿಯಲ್ಲಿ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅದಕ್ಕೆ ಶಂಕು ಸ್ಥಾಪನೆ ಮಾಡಿದರು. ನಂತರ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅಗತ್ಯ ಅನುದಾನ ಕೊಟ್ಟರು. ಆದರೆ, ಅದರು ಉದ್ಘಾಟನೆ ಆಗಿದ್ದು ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ.

ಸಾವಿರ ಆಶಯಗಳು
ಸುವರ್ಣ ವಿಧಾನ ಸೌಧ ಉತ್ತರ ಕರ್ನಾಟಕದ ಹೆಮ್ಮೆಯ ಶಕ್ತಿ ಕೇಂದ್ರ. ಪ್ರತಿ ವರ್ಷ ಅಧಿವೇಶನ ನಡೆಸಲು ನಿರ್ಮಾಣಗೊಂಡಿರುವ ಶಾಶ್ವತ ಕಟ್ಟಡ. ಸುವರ್ಣ ವಿಧಾನ ಸೌಧ ನಿರ್ಮಾಣಗೊಂಡಾಗ ಸಂತಸಗೊಂಡಿದ್ದ ಈ ಭಾಗದ ಜನರ ನಿರೀಕ್ಷೆಗಳು ಈ ಕಟ್ಟಡದೊಂದಿಗೆ ಬೆಸೆದುಕೊಂಡಿವೆ. ಸುವರ್ಣ ಸೌಧ ನಿರ್ಮಾಣ ಮಾಡಿದ ಬೆನ್ನಲ್ಲೇ ಸರ್ಕಾರದ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇಲ್ಲಿ ಪ್ರತಿ ವರ್ಷ ಅಧಿವೇಶನ ನಡೆಸಬೇಕು, ಈ ಭಾಗದ ಜನರ ಅಶಯಗಳಿಗೆ ಸ್ಪಂದಿಸಬೇಕು ಎನ್ನುವುದು ಇಲ್ಲಿನ ಜನರ ಆಶಯ.

ಚೊಚ್ಚಲ ಅಧಿವೇಶನದ ಗೌರವ ಶೆಟ್ಟರ್ ಮುಡಿಗೆ
2012ರ ಡಿ.5ರಿಂದ 10 ದಿನಗಳ ಕಾಲ ಸಿಎಂ ಜಗದೀಶ್ ಶೆಟ್ಟರ್ ಸುವರ್ಣ ವಿಧಾನಸೌಧದಲ್ಲಿ ಚೊಚ್ಚಲ ಅಧಿವೇಶನ ನಡೆಸಿದರು. ಆದ್ದರಿಂದ ಶಕ್ತಿಕೇಂದ್ರದಲ್ಲಿ ಅಧಿವೇಶನ ನಡೆಸಿದ ಗೌರವ ಅವರ ಮುಡಿಗೇರಿದೆ. ಆದರೆ, ಬಿ.ಎಸ್.ಯಡಿಯೂರಪ್ಪ ಅವರಿಂದ ಸರ್ಕಾರ ಬೀಳಿಸುವ ಬೆದರಿಕೆ, ತಮಿಳುನಾಡಿನ ಕಾವೇರಿ ಕ್ಯಾತೆಯಿಂದಾಗಿ ಅಧಿವೇಶನ ಕಾಟಾಚಾರಕ್ಕೆ ಎಂಬಂತೆ ಮುಗಿದು ಹೋಗಿತ್ತು. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯೇ ನಡೆಯಲಿಲ್ಲ.

ಎರಡನೇ ಅಧಿವೇಶನ
ನ.25ರ ಸೋಮವಾರದಿಂದ ಬೆಳಗಾವಿಯ ಸುವರ್ಣ ವಿಧಾನಸೌಧ ಕಟ್ಟಡದಲ್ಲಿ ಎರಡನೇ ಅಧಿವೇಶನ ನಡೆಯಲಿದೆ. ಆದರೆ, ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬೆಳಗಾವಿಯಲ್ಲಿ ಚೊಚ್ಚಲ ಅಧಿವೇಶನ. ಆರು ತಿಂಗಳ ಆಡಳಿತ ಪೂರ್ಣಗೊಳಿಸಿರುವ ಸಿಎಂ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆ ಆರೋಪವಿದ್ದು ಸಚಿವರನ್ನು ತಮ್ಮ ಸಂಪುಟದಿಂದ ಕೈ ಬಿಟ್ಟು ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಎದುರಿಸಲು ಆಗಮಿಸುತ್ತಿದ್ದಾರೆ. ಪ್ರತಿಪಕ್ಷಗಳು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಸಕಲ ರೀತಿಯಲ್ಲಿ ಸಜ್ಜಾಗಿ ನಿಂತಿವೆ.

2 ಅಧಿವೇಶನಕ್ಕೆ ಸೀಮಿತವಾಗಬಾರದು
ಬೆಳಗಾವಿಯ ಸುವರ್ಣ ವಿಧಾನಸೌಧ ಕಟ್ಟಡ ಕೇವಲ ವರ್ಷದಲ್ಲಿ ಎರಡು ಅಧಿವೇಶಗಳನ್ನು ಮಾತ್ರ ನಡೆಸಲು ಸೀಮಿತವಾಗಬಾರದು. ಮಹಾರಾಷ್ಟದಲ್ಲಿ ನಡೆಯುವಂತೆಯೇ ನಿರಂತರವಾಗಿ ಅಧಿವೇಶನ ನಡೆಯಬೇಕು. ಸಚಿವಾಲಯದ ಕನಿಷ್ಠ 20 ಜನ ಹಿರಿಯ ಅಧಿಕಾರಿಗಳು ಇಲ್ಲಿಗೆ ನಿಯೋಜನೆಗೊಳ್ಳಬೇಕು. ವಾರಕ್ಕೆ ಇಬ್ಬರು ಸಚಿವರು ಇಲ್ಲಿ ಕಡ್ಡಾಯವಾಗಿ ಆಗಮಿಸುವಂತೆ ಮಾಡಬೇಕು ಎಂಬುದು ಇಲ್ಲಿನ ಜನರ ಬೇಡಿಕೆ.

ಈಡೇರುತ್ತಾ ಒತ್ತಾಯ
ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗುವ ಇಲಾಖೆಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಬೇಕು. ಮುಖ್ಯವಾಗಿ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿರುವ ಇಲಾಖೆಗಳು ಇಲ್ಲಿಗೆ ಬರಬೇಕು. ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸಿ ಜಿಲ್ಲೆಯ ಅಭಿವೃದ್ಧಿ ಸರ್ಕಾರ ಸಹಕರಿಸಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳಿವೆ ಅವು ಈ ಅಧಿವೇಶನದಿಂದ ಈಡೇರುತ್ತವೆಯೇ ಎಂದು ಕಾದು ನೋಡಬೇಕು.

ವಾರ್ಷಿಕ ಮೂರು ಕೋಟಿ ವೆಚ್ಚ
ನರಮನುಷ್ಯರು ಓಡಾಡದಿದ್ದರೂ ಲಿಫ್ಟ್ ನಿತ್ಯವೂ ಓಡಾಡಬೇಕು, ಖಾಲಿ ಹೊಡೆಯುತ್ತಿದ್ದರೂ ಕೊಠಡಿಗಳಲ್ಲಿ ಏರ್‌ಕಂಡೀಶನ್ ಚಾಲನೆಯಾಗಬೇಕು, ಕಚೇರಿಗಳಲ್ಲಿ ಯಾರಿಲ್ಲದಿದ್ದರೂ ಸ್ವಚ್ಛತೆ ಕಾಪಾಡಬೇಕು ಇದು ಸುವರ್ಣ ಸೌಧದ ಸದ್ಯದ ಸ್ಥಿತಿ ಲೋಕೋಪಯೋಗಿ ಇಲಾಖೆಯ ಮಾಹಿತಿಯಂತೆ ಈ ಕಟ್ಟಡ ನಿರ್ವಹಣೆಗೆ ವಾರ್ಷಿಕ 3 ಕೋಟಿ ರೂ. ಅಗತ್ಯವಿದೆ. ಈ ಅಧಿವೇಶನದ ಮೂಲಕ ಇಲ್ಲಿಗೆ ಅಧಿಕಾರಿಗಳ ಮತ್ತು ಕಚೇರಿಗಳ ಸ್ಥಳಾಂತರ ಆಗುವುದೇ ಎಂದು ಜನರು ಕಾದು ಕುಳಿತಿದ್ದಾರೆ.












Click it and Unblock the Notifications