ಪೇಜಾವರ ಶ್ರೀಗಳ ಕಾರಿನ ಮೇಲೆ ಕಲ್ಲು ತೂರಾಟ
ಬೆಳಗಾವಿ, ಅಕ್ಟೋಬರ್ 20 : ಐದು ಮಂದಿ ಯುವಕರ ತಂಡ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಘಟನೆಯಿಂದಾಗಿ ಎರಡು ವಾಹನಗಳಿಗೆ ಹಾನಿಯಾಗಿದೆ. ಕಲ್ಲು ತೂರಾಟಕ್ಕೆ ಕಾರಣ ತಿಳಿದುಬಂದಿಲ್ಲ.
ಮಂಗಳವಾರ ಮುಂಜಾನೆ ಬೆಳಗಾವಿಯ ಶ್ರೀಕೃಷ್ಣ ಮಠದ ಸಮೀಪ ಈ ಘಟನೆ ನಡೆಸಿದೆ. ಪೇಜಾವರ ಶ್ರೀಗಳು ಇನ್ನೋವಾ ಕಾರು ಮತ್ತು ಮತ್ತೊಂದು ಟಿಟಿ ವಾಹನದ ಮೇಲೆ ಅಪರಿಚಿತ ಯುವಕರ ಗುಂಪು ಕಲ್ಲು ತೂರಾಟ ನಡೆಸಿ ಪರಾರಿಯಾಗಿದೆ. [ಪೇಜಾವರ ಶ್ರೀಗಳ ಸಂದರ್ಶನ ಓದಿ]

ಮೂರು ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶ್ರೀಗಳು ಬೆಳಗಾವಿಯ ಕೃಷ್ಣಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ. ಸೋಮವಾರ ಗೋಕಾಕ್‌ನಲ್ಲಿನ ಕಾರ್ಯಕ್ರಮ ಮುಗಿಸಿಕೊಂಡು ಬಂದು ಶ್ರೀಗಳು ಮಠದಲ್ಲಿ ವಾಸ್ತವ್ಯ ಹೂಡಿದ್ದರು. [ಪೇಜಾವರ ಮಠಕ್ಕೆ 600 ಕೋಟಿ ದೇಣಿಗೆಯ ವಿಷಯ ಏನಾಯ್ತು?]
ಮಂಗಳವಾರ ಮುಂಜಾನೆ 2 ಗಂಟೆಯ ವೇಳೆಗೆ ಮಠದ ಮುಂದೆ ನಿಲ್ಲಿಸಿದ್ದ ಕಾರು ಮತ್ತು ಇತರ ವಾಹನದ ಮೇಲೆ ಮೂರು ಬೈಕ್‌ಗಳಲ್ಲಿ ಬಂದ ಐವರು ಯುವಕರು ಕಲ್ಲು ತೂರಿದ್ದಾರೆ. ಶಬ್ದ ಕೇಳಿ ಇನ್ನೋವಾ ಕಾರು ಚಾಲಕ ಹೊರಗೆ ಬಂದಾಗ ಯುವಕರ ಗುಂಪು ಪರಾರಿಯಾಗಿದೆ.
ಪೊಲೀಸರು ಮಠದ ಆವರಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯಾರು, ಏಕೆ ಕಲ್ಲು ತೂರಾಟ ಮಾಡಿದರು ಎಂಬುದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications