ಶಾದಿಭಾಗ್ಯದ ವಿರುದ್ಧ ಬೇಕಾದ್ರೆ ಕೋರ್ಟ್ ಗೆ ಹೋಗಿ!
ಬೆಳಗಾವಿ, ಡಿ. 5 : ಬುಧವಾರ ವಿಧಾನ ಪರಿಷತ್ತಿನಲ್ಲಿ ಶಾದಿಭಾಗ್ಯ ಯೋಜನೆ ಕುರಿತ ವಿಚಾರ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ಬಿಸಿ-ಬಿಸಿ ಚರ್ಚೆಗೆ ಕಾರಣವಾಯಿತು. ಸಂವಿಧಾನ ಬದ್ಧವಾಗಿ ಯೋಜನೆ ಜಾರಿಗೆ ತಂದಿದ್ದೇವೆ ಇದನ್ನು ಬೇಕಾದರೆ ನ್ಯಾಯಾಲದಲ್ಲೂ ಪ್ರಶ್ನಿಸಿ ಎಂದು ಸಿಎಂ ಪ್ರತಿಪಕ್ಷಗಳಿಗೆ ಸವಾಲು ಹಾಕಿದರು.
ಬುಧವಾರ ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಶಾದಿಭಾಗ್ಯ ಯೋಜನೆಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತ ಮಾಡಬೇಡಿ ಎಂದುಸ ಸರ್ಕಾರಕ್ಕೆ ಮನವಿ ಮಾಡುವ ಮೂಲಕ ಚರ್ಚೆ ಆರಂಭಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರು ಧ್ವನಿ ಗೂಡಿಸಿಸದರು. ಅಂತಿಮವಾಗಿ ಬಿಜೆಪಿ ಸಭಾತ್ಯಾಗ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ಶಾದಿಭಾಗ್ಯ ಯೋಜನೆಯ ಕುರಿತು ಚರ್ಚೆಯಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯ, ಆರ್ಥಿಕ ಲಭ್ಯತೆ ನೋಡಿಕೊಂಡು ಎಲ್ಲ ವರ್ಗಗಳ ಬಡ ಮಹಿಳೆಯರಿಗೆ ಯೋಜನೆ ವಿಸ್ತರಣೆಗೆ ಮಾಡಲು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.(ಬುಧವಾರ ಸದನದಲ್ಲಿ ಏನಾಯ್ತ?)
ಒಂದು ಹಂತದಲ್ಲಿ ಬಿಜೆಪಿ ಸದಸ್ಯರು ಮತಬ್ಯಾಂಕ್ ರಾಜಕೀಯ ಮಾಡುತ್ತಿದ್ದೀರಿ ಎಂದು ಘೋಷಣೆ ಕೂಗಿದರು. ಇದಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಕಾನೂನಿನಂತೆ ಯೋಜನೆ ಘೋಷಿಸಿದ್ದೇವೆ. ಬೇಕಾದರೆ ಕೋರ್ಟ್‌ನಲ್ಲಿ ಪ್ರಶ್ನಿಸಿ ಎಂದೂ ಸಿಎಂ ಸವಾಲು ಹಾಕಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. (ಶಾದಿ ಭಾಗ್ಯ : ಅಡಕತ್ತರಿಯಲ್ಲಿ ಸಿಎಂ ಸಿದ್ದರಾಮಯ್ಯ)
ಗೌಡರ ಸವಾಲು : ಶಾದಿಭಾಗ್ಯ ಯೋಜನೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಅಪವಾದದಿಂದ ತಪ್ಪಿಸಿಕೊಳ್ಳಲು ಎಲ್ಲ ವರ್ಗಗಳಿಗೆ ಘೋಷಣೆ ಮಾಡಿ 50ಕೋಟಿ ರೂ. ತೆಗೆದಿರಿಸಿ ಎಂದು ಪರಿಷತ್ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಸರ್ಕಾರಕ್ಕೆ ಸವಾಲು ಹಾಕಿದರು.
ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಸದಸ್ಯ ಗೋ.ಮಧುಸೂದನ್ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಎಂದು ಹೇಳಿ ಅನಂತರ ಆದೇಶದಲ್ಲಿ ಮುಸ್ಲಿಮರಿಗೆ ಎಂದು ಮಾತ್ರ ಬದಲಾವಣೆ ಮಾಡಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಆದೇಶದಲ್ಲಿ ಆಗಿರುವ ತಪ್ಪಿಗೆ ಸ್ಪಷ್ಟೀಕರಣ ಆದೇಶ ನೀಡಲಾಗಿದ್ದು, ಎಲ್ಲ ಅಲ್ಪಸಂಖ್ಯಾತ ಬಡ ಮಹಿಳೆಯರಿಗೆ ಎಂದು ಬದಲಾವಣೆ ಮಾಡಲಾಗಿದೆ ಎಂದರು.











Click it and Unblock the Notifications