ಪೊಲೀಸ್ ಸಿಬ್ಬಂದಿಗಾಗಿಯೇ ಪ್ರತ್ಯೇಕ ವೈದ್ಯ ಕಾಲೇಜು

ಗೃಹ ಸಚಿವ ಕೆಜೆ ಜಾರ್ಜ್ ಅವರ ಈ ಭರವಸೆಯ ಮಾತುಗಳು ಕಾರ್ಯಗತಗೊಂಡರೆ ಪೊಲೀಸರ ದಿನಭತ್ಯೆ ಆದಷ್ಟು ಬೇಗ 500 ರೂ. ಗೆ ಹೆಚ್ಚಳವಾಗುವ ಸಾಧ್ಯತೆಯಿದೆ. (ಒನ್ಇಂಡಿಯಾದಿಂದ ಉದ್ಯೋಗ ಹುಡುಕಾಟ ಸೇವೆ)
ಪ್ರಸ್ತುತ ಪೊಲೀಸರಿಗೆ ಕೇವಲ 200 ರೂಪಾಯಿ ದಿನಭತ್ಯೆ ದೊರೆಯುತ್ತಿದೆ. ಇದನ್ನು 500 ರೂ. ಗೆ ಹೆಚ್ಚಳ ಮಾಡಲಾಗುವುದು. ಸೇನಾ ಸಿಬ್ಬಂದಿಗೆ ಕ್ಯಾಂಟಿನ್ ಸೌಲಭ್ಯವಿದೆ. ಅದೇ ಮಾದರಿಯಂತೆ ಇನ್ನು ಮುಂದೆ ಎಲ್ಲ ಪೊಲೀಸ್ ಠಾಣೆಗಳಲ್ಲಿಯೂ ಕ್ಯಾಂಟಿನ್ ಆರಂಭಿಸಿ ಪೊಲೀಸರಿಗೆ ರಿಯಾಯ್ತಿ ದರದಲ್ಲಿ ಊಟ-ಉಪಚಾರ-ತಿಂಡಿ ಒದಗಿಸಲಾಗುವುದು ಎಂದೂ ಸಚಿವರು ಹೇಳಿದರು.
ಇನ್ನು, ಪೊಲೀಸರ ಆರೋಗ್ಯ ಸುಧಾರಣೆಗಾಗಿ 600 ಬೆಡ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಜತೆಗೆ ಪೊಲೀಸ್ ಮತ್ತು ಅವರ ಸಿಬ್ಬಂದಿಗಾಗಿಯೇ ಒಂದು ಮೆಡಿಕಲ್ ಕಾಲೇಜು ತೆರೆಯಲು ಉದ್ದೇಶಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ. ಇದುವರೆಗೆ ಪೊಲೀಸರಿಗೆ ಮಾತ್ರ ಸೀಮಿತವಾಗಿದ್ದ ಜೀವ ವಿಮೆ ಸೌಲಭ್ಯವನ್ನು ಇನ್ನು ಮುಂದೆ ಅವರ ಹೆಂಡತಿ, ಮಕ್ಕಳು ಮತ್ತು ಪೋಷಕರಿಗೂ ವಿಸ್ತರಣೆ ಮಾಡುವುದಾಗಿ ಅವರು ಹೇಳಿದರು.
ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಎಂಸಿ ನಾಣಯ್ಯ ಅವರು ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ದಿನದ 24 ಗಂಟೆ ಕಾಲ ಕೆಲಸ ಮಾಡುವ ಪೊಲೀಸರ ಭತ್ಯೆ ಹೆಚ್ಚು ಮಾಡಲು ಸರ್ಕಾರ ಮೀನಾಮೇಷ ಎಣಿಸಬಾರದು. ಅವರಿಗೆ ಬೇಗ ದಿನಭತ್ಯೆ ಹೆಚ್ಚಳ ಮಾಡಿಕೊಡಿ ಎಂದು ಕೋರಿದರು.












Click it and Unblock the Notifications