ಐಎಂಎ ಆಯ್ತು, ಈಗ ಎಂಇಎಸ್ ಮುಖಂಡನಿಂದ ಬಹುಕೋಟಿ ಹಗರಣ ಆರೋಪ
ಬೆಳಗಾವಿ, ನವೆಂಬರ್ 14: ಐಎಂಎ ಹಗರಣದ ನಂತರ ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ಎಂಇಎಸ್ ಮುಖಂಡರೊಬ್ಬರು ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ತಿಳಿದುಬಂದಿದೆ.
ಎಂಇಎಸ್ ಮುಖಂಡ ಕಿರಣ್ ಠಾಕೂರ್ ಒಡೆತನದ ಲೋಕಮಾನ್ಯ ಮಲ್ಟಿ ಪರ್ಪಸ್ ಕೊ ಆಪರೇಟಿವ್ ಸೊಸೈಟಿಯಿಂದ ವಂಚನೆ ನಡೆದಿದ್ದು, ಠೇವಣಿದಾರರು ಇಟ್ಟಿರುವ ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ.
ಸುಮಾರು 2 ಸಾವಿರ ಕೋಟಿ ರೂಪಾಯಿವರೆಗೂ ಹಣ ದುರುಪಯೋಗವಾಗಿದ್ದು, ಶಾಸಕ ಅಭಯ ಪಾಟೀಲ್ ಸೇರಿದಂತೆ 60 ಶಾಸಕರು ಸೇರಿ ಇಡಿ, ಕೇಂದ್ರ ಹಣಕಾಸು ಇಲಾಖೆ, ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದಾರೆ. ಪ್ರಕರಣದ ಸಂಪೂರ್ಣ ತನಿಖೆಗೆ ಸಹಕಾರ ಇಲಾಖೆಗೆ ಸೂಚನೆ ನೀಡಲಾಗಿದ್ದು, ಇಂದಿನಿಂದ ಸಹಕಾರ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ಗೋವಾ, ಮಹಾರಾಷ್ಟ್ರ, ಕರ್ನಾಟಕದ ಹಲವು ರಾಜಕಾರಣಿಗಳು ಈ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿರುವುದಾಗಿಯೂ ತಿಳಿದುಬಂದಿದೆ. ಟಿಳಕವಾಡಿ ಬ್ರ್ಯಾಂಚ್ ಗೆ ಸಹಕಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಸಹಕಾರ ರೆಜಿಸ್ಟ್ರಾರ್ ಶಿವಪ್ರಕಾಶ ಅವರಿಂದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ.












Click it and Unblock the Notifications