ಚಿಕ್ಕೋಡಿಯಲ್ಲಿ ಇಬ್ಬರೂ ಅಭ್ಯರ್ಥಿಗಳಿಗೆ ಒಳಪೆಟ್ಟಿನ ಆತಂಕ!
ಬೆಳಗಾವಿ, ಏಪ್ರಿಲ್ 27: ಬೆಳಗಾವಿಗೆ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂಜೆ ಆಗಮಿಸುತ್ತಿದ್ದಾರೆ. ಭಾನುವಾರ ಬೆಳಗಾವಿ, ಚಿಕ್ಕೋಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ನಡೆಸಿ, ಮತ ಕೇಳಲಿದ್ದಾರೆ.
ಚಿಕ್ಕೋಡಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಮತ್ತು ಕಾಂಗ್ರೆಸ್‌ನಿಂದ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿದ್ದಾರೆ. ಆದರೆ ಇಬ್ಬರೂ ಅಭ್ಯರ್ಥಿಗಳಿಗೆ ಒಳ ಏಟಿನ ಭೀತಿ ಕಾಡುತ್ತಿದೆ. ಮೇ 7ರಂದು ಚಿಕ್ಕೋಡಿ ಕ್ಷೇತ್ರದ ಮತದಾನ ನಡೆಯಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗುತ್ತಿದೆ.

ಪ್ರಚಾರದಿಂದ ದೂರ: ಚಿಕ್ಕೋಡಿಯ ಹಾಲಿ ಸಂಸದ ಅಣ್ಣಾ ಸಾಹೇಬ ಜೊಲ್ಲೆ ಚುನಾವಣಾ ದಿನಾಂಕ ಘೋಷಣೆಗೆ ಆರು ತಿಂಗಳು ಮೊದಲೇ ಪ್ರಚಾರವನ್ನು ಆರಂಭಿಸಿದ್ದರು. ಅವರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಲೆಕ್ಕಾಚಾರ ತಪ್ಪಾಗಿದೆ. ಹಾಲಿ ಸಂಸದರಿಗೆ ಮತ್ತೆ ಬಿಜೆಪಿ ಅವಕಾಶ ನೀಡಿದೆ.
2ನೇ ಬಾರಿ ಕಣಕ್ಕಿಳಿದಿರುವ ಅವರ ಪರವಾಗಿ ಪ್ರಚಾರ ನಡೆಸಲು ಬಿಜೆಪಿ ನಾಯಕರು ಗೈರಾಗುತ್ತಿದ್ದಾರೆ. ಒಂದು ಬಾರಿಯ ಸಂಸದ ರಮೇಶ್ ಕತ್ತಿ, ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾದ ಪ್ರಭಾಕರ ಕೋರೆ, ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಅಣ್ಣಾ ಸಾಹೇಬ ಜೊಲ್ಲೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮುಂತಾದವರು ಪ್ರಚಾರವನ್ನು ಕೈಗೊಂಡಿದ್ದಾರೆ. ಪ್ರಭಾಕರ ಕೋರೆ ಅವರು ಕುಟುಂಬದ ಸದಸ್ಯರಿಗೆ, ರಮೇಶ್ ಕತ್ತಿ ತಮಗೆ ಚಿಕ್ಕೋಡಿ ಕ್ಷೇತ್ರದ ಟಿಕೆಟ್ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಟಿಕೆಟ್ ಹಾಲಿ ಸಂಸದರಿಗೆ ಸಿಕ್ಕಿದ್ದು, ಇನ್ನೂ ಬಿಜೆಪಿ ಘಟಕದಲ್ಲಿ ಅಸಮಾಧಾನವಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಕಾಂಗ್ರೆಸ್‌ಗೂ ಇದೆ ಭೀತಿ: ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸತೀಶ್ ಜಾರಕಿಹೊಳಿ ಚಿಕ್ಕೋಡಿಯಲ್ಲಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಗೆ ಟಿಕೆಟ್ ಕೊಡಿಸುವಲ್ಲಿ ಸಫಲವಾಗಿದ್ದಾರೆ. ಆದರೆ ಕಾಂಗ್ರೆಸ್‌ಗೆ ಸಹ ಒಳ ಏಟಿನ ಆತಂಕವಿದೆ.
ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಪ್ರಕಾಶ್ ಹುಕ್ಕೇರಿ, ಲಕ್ಷ್ಮಣ ಸವದಿ ಎಲ್ಲರೂ ಸೇರಿ ಶಕ್ತಿ ಪ್ರದರ್ಶನ ಮಾಡಿದ್ದರು. ಆದರೆ ಪ್ರಚಾರದ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶನ ಮುಖ್ಯವಾಗಿದೆ. ಲಕ್ಷ್ಮಣ ಸವದಿ ಈಗಾಗಲೇ ಪ್ರಿಯಾಂಕಾ ಪರವಾಗಿ ಪ್ರಚಾರ ಮಾಡುತ್ತಾ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ.
ಸಹಕಾರಿ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಣ್ಣಾ ಸಾಹೇಬ ಜೊಲ್ಲೆ ಪ್ರಭಾವಿ ಮತ್ತು ಬೆಳಗಾವಿಯ ಪ್ರಭಾವಿ ಕುಟುಂಬ ಜಾರಕಿಹೊಳಿ ಕುಟುಂಬದ ಕುಡಿ ಪ್ರಿಯಾಂಕಾ ಜಾರಕಿಹೊಳಿ ನಡುವೆ ನೇರ ಪೈಪೋಟಿ ಇದೆ.
ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಶಂಭು ಕಲ್ಲೋಳಿಕರ ಸತೀಶ್ ಜಾರಕಿಹೊಳಿ ತಮಗೆ ಟಿಕೆಟ್ ತಪ್ಪಿಸಿದ್ದಾರೆ ಎಂಬ ಅಸಮಾಧಾನದಲ್ಲಿದ್ದು, ಕಾಂಗ್ರೆಸ್‌ನ ಮತಗಳನ್ನು ಕಿತ್ತುಕೊಳ್ಳಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಪ್ರಭಾವ ಪುತ್ರಿ ಪ್ರಿಯಾಂಕಾಗೆ ಸಹಾಯಕವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಕಾಗವಾಡ, ಅಥಣಿ, ಕುಡಚಿ, ರಾಯಭಾಗ, ಯಮಕನಮರಡಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇವುಗಳಲ್ಲಿ5 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಒಟ್ಟು ಮತದಾರರು 17,41,758.
ಕ್ಷೇತ್ರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿಯ ಅಣ್ಣಾ ಸಾಹೇಜ ಜೊಲ್ಲೆ 645,017 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಪ್ರಕಾಶ್ ಹುಕ್ಕೇರಿ 526,140 ಮತಗಳನ್ನು ಪಡೆದು ಸೋಲು ಕಂಡಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ.












Click it and Unblock the Notifications