ಬೆಳಗಾವಿ: ಯಲ್ಲಮ್ಮ ಜಾತ್ರೆಯಲ್ಲಿ ದರೋಡೆಕೋರರ ಆರ್ಭಟ
ಬೆಳಗಾವಿ, ಡಿಸೆಂಬರ್ 15: ಬೆಳಗಾವಿ ಗಡಿಯಲ್ಲಿನ ಕೊಕಟನೂರು ಯಲ್ಲಮ್ಮನ ಜಾತ್ರೆಯಲ್ಲಿ ದರೋಡೆಕೋರರ ಗುಂಪು ದಾಳಿ ಮಾಡಿ ಭಕ್ತಾದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಗ-ನಾಣ್ಯ ದೋಚಿದೆ.
ತಡ ರಾತ್ರಿ ದಾಳಿ ನಡೆಸಿರುವ 20ಕ್ಕೂ ಹೆಚ್ಚು ಜನ ದರೋಡೆಕೋರರ ಗುಂಪು, ಬಹಿರ್ದೆಸೆಗೆಂದು ಬಯಲಿಗೆ ತೆರಳಿದ್ದ ಭಕ್ತಾದಿಗಳ ಮೇಲೆ ದಾಳಿ ನಡೆಸಿ ಚಾಕುವಿನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಹಣ, ಒಡವೆ, ಮೊಬೈಲ್ ಗಳನ್ನು ದೋಚಿದೆ.
ಇರಿತಕ್ಕೊಳಗಾದವರಲ್ಲಿ ಸತೀಶ ಪಾಟೀಲ, ಪ್ರವೀಣ ಸ್ವಾಮಿ ಎಂಬುವವರಿಗೆ ತೀರ್ವ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆಯುತ್ತಿರುವ ಈ ಜಾತ್ರೆಯಲ್ಲಿ ಉತ್ತರ ಕರ್ನಾಟಕ-ದಕ್ಷಿಣ ಮಹಾರಾಷ್ಟ್ರ ದಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ, ಕಳೆದೆಂದೂ ಈ ರೀತಿಯ ಅಹಿತಕರ ಘಟನೆ ನಡೆದಿರಲಿಲ್ಲ, ಆದರೆ ಈಗ ನಡೆದಿರುವ ಘಟನೆ ಭಕ್ತಾದಿಗಳನ್ನು ಬೆಚ್ಚಿ ಬೀಳಿಸಿದೆ.
ಇರಿತಕ್ಕೊಳಗಾದ ಬಹುತೇಕರು ಭಕ್ತರು ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿಗಳು ಎನ್ನಲಾಗಿದೆ. ಗಾಯಾಳುಗಳನ್ನು ಅಥಣಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications