ಅಕ್ಟೋಬರ್ ತನಕ ನದಿ ಮರಳು ಗಣಿಗಾರಿಕೆಗೆ ನಿರ್ಬಂಧ
ಬೆಳಗಾವಿ, ಜುಲೈ 06; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ ತಿಂಗಳ ತನಕ ನದಿಮರಳು ಗಣಿಗಾರಿಕೆಗೆ ನಿರ್ಬಂಧ ಹೇರಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಜಿಲ್ಲಾ ಟಾಸ್ಕ್‌ಫೋರ್ಸ್ (ಗಣಿ) ಸಮಿತಿ ಸಭೆ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ನಿಯಂತ್ರಣ ಸಮಿತಿ ಮತ್ತು ಜಿಲ್ಲಾ ಮರಳು ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

"ಸರ್ಕಾರದ ಮಾರ್ಗಸೂಚಿ ಪ್ರಕಾರ ಜೂನ್ ತಿಂಗಳಿನಿಂದ ಅಕ್ಟೋಬರ್ 1ರ ವರೆಗೆ ನದಿ ಮರಳು ಗಣಿಗಾರಿಕೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಅಕ್ಟೋಬರ್ ತನಕ ಯಾವುದೇ ರೀತಿಯ ಗಣಿಗಾರಿಕೆ ಚಟುವಟಿಕೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು" ಎಂದರು.
ಈ ಅವಧಿಯಲ್ಲಿ ಮರಳು ಗಣಿಗಾರಿಕೆ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸ್ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಈ ಅವಧಿಯಲ್ಲಿ ನಿರ್ಮಾಣ ಕೆಲಸಗಳಿಗೆ ಅಗತ್ಯವಿರುವ ಎಂ ಸ್ಯಾಂಡ್ ಸಾಗಾಣಿಕೆಗೆ ಮಾತ್ರ ಅವಕಾಶವಿರುತ್ತದೆ. ಅಕ್ರಮ ಗಣಿಗಾರಿಕೆ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿಯನ್ನು ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸಹ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಪಿಎಸ್ ಅಳವಡಿಕೆ ಕಡ್ಡಾಯ; ಸಭೆಯಲ್ಲಿ ನಿಯಮಾವಳಿ ಮೀರಿ ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆ ಕಂಡುಬಂದರೆ ಕೂಡಲೇ ಪೊಲೀಸ್, ಕಂದಾಯ ಇಲಾಖೆಗಳಿಗೆ ಮಾಹಿತಿಯನ್ನು ನೀಡುವುದರ ಜತೆಗೆ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಸೂಚನೆ ಕೊಟ್ಟಿದ್ದಾರೆ.
ಪರ್ಮಿಟ್ ಇಲ್ಲದೇ ಮರಳು ಸಾಗಾಣಿಕೆ, ಮಿತಿಮೀರಿದ ಭಾರ ಹೊತ್ತು ಸಾಗುವ ವಾಹನಗಳ ಸಂಚಾರ ತಡೆಗಟ್ಟಲು ಸಂಬಂಧಿಸಿದ ಪ್ರಾದೇಶಿಕ ಸಾರಿಗೆ ಇಲಾಖೆಗಳ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಗಣಿಗಾರಿಕೆ ಹಾಗೂ ಮರಳು ಸಾಗಾಣಿಕೆಗೆ ಬಳಸಲಾಗುವ ಪ್ರತಿಯೊಂದು ವಾಹನಗಳ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಒಂದು ವೇಳೆ ಸೂಕ್ತ ದಾಖಲಾತಿ ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ವಾಹನ ಬಳಕೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮರಳು ಅಥವಾ ಜಮೀನುಗಳಿಂದ ಮಣ್ಣು ಸಾಗಾಣಿಕೆಗೆ ಸಂಬಂಧಿಸಿದಂತೆ ಇರುವ ನಿಯಮಾವಳಿ ಕುರಿತು ಪ್ರತಿಯೊಂದು ಗ್ರಾಮ ಪಂಚಾಯತಿಗಳಿಗೆ ಮಾಹಿತಿಯನ್ನು ನೀಡಬೇಕು. ಮಣ್ಣು ಸಾಗಿಸಲು ಕೂಡ ಜಿಲ್ಲಾ ಟಾಸ್ಕ್ ಫೋರ್ಸ್ ವತಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆಯೂ ಸಾರ್ವಜನಿಕರಿಗೆ ಮತ್ತು ಗ್ರಾಮ ಪಂಚಾಯತಿಗಳಿಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಕಲ್ಲುಗಣಿ ಗುತ್ತಿಗೆಗೆ ಸ್ವೀಕೃತವಾಗಿರುವ ಅರ್ಜಿಗಳಿಗೆ ನಿರಾಕ್ಷೇಪಣಾ ಪತ್ರ ನೀಡದೇ ಬಾಕಿ ಉಳಿದಿರುವ ಅರ್ಜಿಗಳ ಕುರಿತು ಹಾಗೂ ಅಕ್ರಮ ಗಣಿಗಾರಿಕೆ, ಸಾಗಾಣಿಕೆ ಮತ್ತು ದಾಸ್ತಾನಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸ್ವೀಕೃತವಾಗಿರುವ ದೂರುಗಳು ಮತ್ತು ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಎಲ್ಲ ಗಣಿಗಾರಿಕೆ, ಕ್ರಷರ್ ಹಾಗೂ ಮರಳು ಸಾಗಾಣಿಕೆಯ ವಾಹನಗಳಿಗೆ ಜುಲೈ 15ರೊಳಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಜಿಪಿಎಸ್ ಇಲ್ಲದಿರುವ ವಾಹನಗಳಲ್ಲಿ ಸಾಗಾಣಿಕೆ ಕಂಡುಬಂದರೆ ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಗಣಿಗಾರಿಕೆಯ ಲೈಸೆನ್ಸ್ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ಕೊಟ್ಟಿದ್ದಾರೆ.
ಜಿಪಿಎಸ್ ಅಳವಡಿಸಲು ಕ್ರಮ ಕೈಗೊಳ್ಳದಿದ್ದರೆ ಕ್ರಷರ್ ಮತ್ತು ಗಣಿಗಾರಿಕೆ ಲೈಸೆನ್ಸ್ ರದ್ದುಪಡಿಸಲಾಗುವುದು. ಜುಲೈ 15ರಿಂದ ಜಿಪಿಎಸ್ ಅಳವಡಿಸಿರುವುದನ್ನು ಪರಿಶೀಲನೆ ಆರಂಭಿಸಲಾಗುತ್ತದೆ. ಒಂದು ವೇಳೆ ಜಿಪಿಎಸ್ ಅಳವಡಿಸದಿದ್ದರೆ ಅಂತಹ ವಾಹನಗಳ ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದರು.
ಗಣಿಗಾರಿಕೆಯಲ್ಲಿ ಕಾರ್ಯ ನಿರ್ವಹಣೆ ಮಾಡುವ ವಾಹನಗಳಿಗೆ ಜಿಪಿಎಸ್ ಇಲ್ಲದಿದ್ದರೆ ಪರವಾನಿಗೆ ರದ್ದುಗೊಳಿಸಬೇಕು. ವಾಹನಗಳಿಗೆ ಜಿಪಿಎಸ್ ಅಳವಡಿಸುವುದು ಆಯಾ ಕ್ವಾರಿ ಅಥವಾ ಕ್ರಷರ್ ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.












Click it and Unblock the Notifications