ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ನೆನಪು
ಬೆಳಗಾವಿ, ಜನವರಿ 11 : 2019ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಸಹ ಪಾಲ್ಗೊಳ್ಳಲಿದೆ. 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು ಬಿಂಬಿಸುವ ಸ್ತಬ್ಧ ಚಿತ್ರ ರಚನೆ ಮಾಡಲಾಗುತ್ತದೆ.
ಮಹಾತ್ಮ ಗಾಂಧಿ ಅವರ 150ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ 'ಮಹಾತ್ಮ ಗಾಂಧಿ ಪರಿಕಲ್ಪನೆ' ಕುರಿತು ಸ್ತಬ್ದ ಚಿತ್ರ ರಚನೆ ಮಾಡುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ದೇಶದ 30 ರಾಜ್ಯಗಳ ಪೈಕಿ ಕರ್ನಾಟಕ ಸೇರಿದಂತೆ 13 ರಾಜ್ಯಗಳ ಸ್ತಬ್ಧ ಚಿತ್ರ ಪರೇಡ್‌ನಲ್ಲಿ ಪಾಲ್ಗೊಳ್ಳಲಿವೆ.
ಬೆಳಗಾವಿಯ ಟಿಳಕವಾಡಿಯಲ್ಲಿ 1924ರ ಡಿಸೆಂಬರ್ 26ರಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ಅಧಿವೇಶನ ನಡೆದಿತ್ತು. 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದ ಅಧಿವೇಶನದ ನೇತೃತ್ವವನ್ನು ಮಹಾತ್ಮಾ ಗಾಂಧಿ ವಹಿಸಿದ್ದರು.

ಈ ಅಧಿವೇಶನದ ಮಾದರಿಯ ಸ್ತಬ್ಧ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತದೆ. ರಾಜ್ಯದ ವಾರ್ತಾ ಮತ್ತು ಪ್ರಸಾರ ಖಾತೆ ಸ್ತಬ್ಧ ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದೆ. ನವದೆಹಲಿಯಲ್ಲಿ ಚಿತ್ರ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಜನವರಿ 20ರೊಳಗೆ ಸ್ತಬ್ಧ ಚಿತ್ರ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಜನವರಿ 22ರಿಂದ ಪರೇಡ್ ತಾಲೀಮು ನಡೆಯಲಿದ್ದು, ಇದರಲ್ಲಿ ಸ್ತಬ್ದ ಚಿತ್ರ ಪಾಲ್ಗೊಳ್ಳಲಿದೆ. ಸತತ ಎಂಟು ವರ್ಷಗಳಿಂದ ರಾಜ್ಯದ ಸ್ತಬ್ಧ ಚಿತ್ರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕಾಗಿ ಹುಲಿಗೋಳ ನಾರಾಯಣರಾವ್ ಅವರು 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಎಂಬ ಗೀತೆಯನ್ನು ಬರೆದಿದ್ದರು. ಸ್ತಬ್ಧ ಚಿತ್ರದಲ್ಲಿ ಈ ಗೀತೆಯನ್ನು ವಾದ್ಯದ ಮೂಲಕ ನುಡಿಸಲು ತೀರ್ಮಾನಿಸಲಾಗಿದೆ.












Click it and Unblock the Notifications