ಬೆಳಗಾವಿಯಲ್ಲಿ ಮಳೆ; ಪ್ರವಾಹದ ಭೀತಿ ಇಲ್ಲ ಎಂದ ಡಿಸಿ

ಬೆಳಗಾವಿ, ಜುಲೈ 25; ಬೆಳಗಾವಿ ಜಿಲ್ಲೆಯಾದ್ಯಂತ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಜಿಲ್ಲೆಯ ನದಿಗಳಾದ ಕೃಷ್ಣ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಒಳಹರಿವು ಹೆಚ್ಚಾಗಿದ್ದು, ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ.

ಮಳೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ವಿವಿಧ ನದಿಪಾತ್ರದ ಸ್ಥಳಗಳಿಗೆ ಭೇಟಿ ನೀಡಿ, ನದಿಯ ನೀರಿನ ಮಟ್ಟದ ಮಾಹಿತಿ ಸಂಗ್ರಹಿಸಿದರು.

Rain In Belagavi DC Nitesh Patil Inspects River Water Level

ಜಿಲ್ಲೆಯ ಪ್ರಮುಖ ನದಿಗಳಾದ ಕೃಷ್ಣ ನದಿಯಲ್ಲಿ 1.07 ಲಕ್ಷ ಕ್ಯೂಸೆಕ್, ಘಟಪ್ರಭಾ ನದಿಯಲ್ಲಿ 30 ಸಾವಿರ ಕ್ಯೂಸೆಕ್ ಹಾಗೂ ಮಲಪ್ರಭಾ ನದಿಯಲ್ಲಿ 13.50 ಸಾವಿರ ಕ್ಯೂಸೆಕ್ ಒಳಹರಿವು ಇದೆ. ಇದರಿಂದಾಗಿ ಆಲಮಟ್ಟಿ, ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯಗಳಲ್ಲಿ ಕ್ರಮೇಣವಾಗಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಕುಡಿಯಲು ಹಾಗೂ ಬೆಳೆಗಳಿಗೆ ಅನುಕೂಲವಾಗಲಿದೆ.

ಸಾರ್ವಜನಿಕರು ಎಚ್ಚರ ವಹಿಸಬೇಕು; ಬೆಳಗಾವಿ ಜಿಲ್ಲೆಯಾದ್ಯಂತ ಇರುವ ಕೆಲವು ಸಣ್ಣ ಸೇತುವೆಗಳು ಮುಳುಗಡೆಯಾಗಿದ್ದು, ಸಾರ್ವಜನಿಕರು ಹಾಗೂ ರೈತರು ಎಚ್ಚರಿಕೆ ವಹಿಸಬೇಕು. ಜಲಾವೃತವಾಗಿರುವ ಈ ಮಾರ್ಗಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಪ್ರವಾಹ ಪರಿಸ್ಥಿತಿ ಎದುರಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ನದಿತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ್ ತಿಳಿಸಿದರು. ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ವಿವಿಧಇಲಾಖೆಗಳಿಂದ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಜಿಲ್ಲೆಯಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ. ತುರ್ತು ಸಂದರ್ಭಗಳಲ್ಲಿ ಜನರು ಹಾಗೂ ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರವಾಹ ಪರಿಸ್ಥಿತಿ ಎದುರಾದರೆ ತುರ್ತು ಕಾರ್ಯಾಚರಣೆಗೆ ಅಗತ್ಯವಿರುವ ಬೋಟ್ ಮತ್ತಿತರ ಸಲಕರಣೆಗಳು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ಇದಲ್ಲದೇ ಔಷಧವಸ್ತುಗಳು, ಜಾನುವಾರುಗಳಿಗೆ ಮೇವು ಸೇರಿದಂತೆ ಪ್ರತಿಯೊಂದು ವಿಷಯಗಳ ಬಗ್ಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸೇತುವೆ ಮೇಲೆ ನಿರ್ಬಂಧ; ಜಿಲ್ಲೆಯ 15 ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿರುತ್ತದೆ. ಈ ಸೇತುವೆಗಳ ಎರಡೂ ಬದಿಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ನೀರಿನ ಒಳಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳಲ್ಲಿ ಸುರಕ್ಷತೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಅದೇ ರೀತಿ ಪ್ರವಾಸಿತಾಣಗಳಲ್ಲೂ ಸಿಬ್ಬಂದಿ ನಿಯೋಜಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೆಳಗಾವಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ಬಳಿಯಲ್ಲಿ ಘಟಪ್ರಭಾ ನದಿಯ ಹರಿವು ವೀಕ್ಷಿಸಿದ ಹಿರಿಯ ಅಧಿಕಾರಿಗಳ ತಂಡವು ನಂತರ ನಿಪ್ಪಾಣಿ ತಾಲೂಕಿನ ವೇದಗಂಗಾ-ದೂಧಗಂಗಾ ನದಿಪಾತ್ರದಲ್ಲಿ ಪರಿಶೀಲನೆ ಕೈಗೊಂಡಿತು. ಈ ಸಂದರ್ಭದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಸಹ ಉಪಸ್ಥಿತರಿದ್ದರು. ಸಂಭವನೀಯ ಪ್ರವಾಹ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿದರು.

ವೇದಗಂಗಾ-ದೂಧಗಂಗಾ ನದಿಗಳಲ್ಲಿ ಹೆಚ್ಚಿನ ಒಳಹರಿವು ಕಂಡುಬರುತ್ತಿದ್ದು, ಎರಡೂ ನದಿಗಳಲ್ಲಿ ಒಟ್ಟಾರೆ 24 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಆದ್ದರಿಂದ ಈ ನದಿಪಾತ್ರದ ಜನರು ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಜಾನುವಾರುಗಳ ಸಮೇತ ಎತ್ತರದ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+