ಸಂಗೊಳ್ಳಿ ರಾಯಣ್ಣ ಉತ್ಸವ 2024; ವೀರ ಜ್ಯೋತಿಗೆ ಯಾತ್ರೆಗೆ ಚಾಲನೆ
ಬೆಳಗಾವಿ, ಜನವರಿ 15: ಬೆಳಗಾವಿಯಲ್ಲಿ ಜನವರಿ 17 ಹಾಗೂ 18ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ 2024 ನಡೆಯಲಿದೆ. ಉತ್ಸವದ ಹಿನ್ನಲೆಯಲ್ಲಿ ವೀರ ಜ್ಯೋತಿಗೆ ಯಾತ್ರೆಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವದ ಅಂಗವಾಗಿ ಬೆಳಗಾವಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ವೀರ ಜ್ಯೋತಿ ಯಾತ್ರೆಗೆ ರಾಯಣ್ಣನ ಐಕ್ಯ ಸ್ಥಳದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಜ್ಯೋತಿ ಯಾತ್ರೆಗೆ ಹಸಿರು ನಿಶಾನೆ ತೋರಿಸಿದರು. ನಂದಗಡದ ರಾಯಣ್ಣ ವೃತ್ತದಿಂದ ಜ್ಯೋತಿಯನ್ನು ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಖಾನಾಪುರ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ನಂದಗಡ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂದಗಡದಲ್ಲಿಯೂ ಉತ್ಸವ ಮಾಡಬೇಕು; ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, "ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ದೇಶದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ಚನ್ನಮ್ಮಳ ಬಲಗೈ ಬಂಟನಾಗಿ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಸಿಡಿದೆದ್ದು, ದೇಶದ ಸ್ವಾತಂತ್ರಕ್ಕಾಗಿ ನೇಣುಗಂಬದವರೆಗೆ ನಿರಂತರ ಸೆಣಸಿದ ಮಹಾನ್ ಶೂರ" ಎಂದು ಬಣ್ಣಿಸಿದರು.
"ಸಂಗೊಳ್ಳಿ ರಾಯಣ್ಣ ಸಂಗೊಳ್ಳಿಯಲ್ಲಿ ಜನ್ಮ ಪಡೆದರು ತಮ್ಮ ಆಶಯದಂತೆ ಅವರು ಐಕ್ಯರಾಗಿದ್ದು, ನಂದಗಡದಲ್ಲಿ. ರಾಯಣ್ಣ ಕೇವಲ 33 ವರ್ಷ ಬದುಕಿದರು. ಇಡೀ ಜಗತ್ತು ಅವರ ಹೆಸರು ಗುರುತಿಸುವಷ್ಟು ದೊಡ್ಡ ಹೆಸರು ಸಂಪಾದನೆ ಮಾಡಿದ್ದಾರೆ. ರಾಯಣ್ಣನ ದೇಶ ಪ್ರೇಮ, ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿ" ಎಂದು ಹೇಳಿದರು.
"ಸಂಗೊಳ್ಳಿ ರಾಯಣ್ಣನಂತಹ ಮಕ್ಕಳು ಪ್ರತಿ ಮನೆ ಮನೆಯಲ್ಲಿ ಜನಿಸಲಿ ಎಂಬುದು ಪ್ರತಿಯೊಬ್ಬರ ಆಸೆ. ಅವರ ಜನ್ಮದಿನ ಆಗಸ್ಟ್ 15ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನವಾದರೆ, ಹುತಾತ್ಮರಾದ ದಿನ ಜನವರಿ 26 ಭಾರತ ಗಣರಾಜ್ಯೋತ್ಸವ ದಿನವಾಗಿರುವುದು ವಿಶೇಷ" ಎಂದರು.
"ಸಂಗೊಳ್ಳಿ ಉತ್ಸವದಂತೆ ನಂದಗಡದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಉತ್ಸವ ಮಾಡಬೇಕು ಎಂದು ಅಭಿಮಾನಿಗಳ ಬೇಡಿಕೆಯಾಗಿತ್ತು. ಅದರಂತೆ ಸರ್ಕಾರ ಸಹ ಇದಕ್ಕೆ ಅನುಮತಿ ನೀಡಿ ಈ ವರ್ಷ ಜಿಲ್ಲಾಡಳಿತದಿಂದ ನಂದಗಡ ಉತ್ಸವ ಆಚರಣೆ ಮಾಡಲಾಗುತ್ತಿದೆ. ಬರುವ ವರ್ಷದಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ನಂದಗಡ ಉತ್ಸವ ನಡೆಯಲಿ ಎಂಬುದು ನನ್ನ ಆಶಯವಾಗಿದೆ" ಎಂದು ತಿಳಿಸಿದರು.
ಸಿದ್ಧತೆ ಪರಿಶೀಲನೆ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ 2024ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಕೆ. ಧರಣಿದೇವಿ ಮಾಲಗತ್ತಿ ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.
ನಂದಗಡದಿಂದ ಬೆಳಗಾವಿ ನಗರಕ್ಕೆ ಆಗಮಿಸಿದ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಯನ್ನು ಸ್ವಾಗತಿಸಿದ ಬಳಿಕ ಅವರು ಸಂಗೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದರು. "ಸರ್ಕಾರ ಈ ಬಾರಿ ಸಂಗೊಳ್ಳಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ 1.50 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅರ್ಥಪೂರ್ಣ ಹಾಗೂ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿವೆ" ಎಂದು ತಿಳಿಸಿದರು.
"ಉತ್ಸವದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಶೌರ್ಯಭೂಮಿ (ಶಿಲ್ಪವನ)ವನ್ನು ಕೂಡ ಮುಖ್ಯಮಂತ್ರಿಗಳು ಲೋಕಾರ್ಪಣೆ ಮಾಡಲಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಜೀವನಚರಿತ್ರೆ ಹಾಗೂ ಶೌರ್ಯವನ್ನು ಬಿಂಬಿಸುವ ಮಾಹಿತಿಯನ್ನು ಈ ವನದಲ್ಲಿ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ಇದು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಲಿದೆ" ಎಂದರು.
ಡಾ. ಕೆ. ಧರಣಿದೇವಿ ಮಾಲಗತ್ತಿ ಅವರು ಶಾಲೆಯ ಬಳಿ ಉತ್ಸವದ ಬೃಹತ್ ವೇದಿಕೆ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಜನರು ಭಾಗವಹಿಸುವುದರಿಂದ ಕುಡಿಯುವ ನೀರು, ಮೊಬೈಲ್ ಶೌಚಾಲಯ, ಪಾರ್ಕಿಂಗ್ ಮತ್ತಿತರ ಸೌಕರ್ಯಗಳನ್ನು ಕೂಡ ಜಿಲ್ಲಾಡಳಿತದ ವತಿಯಿಂದ ಒದಗಿಸಲಾಗುತ್ತಿದೆ ಎಂದು ಹೇಳಿದರು.












Click it and Unblock the Notifications