'ಅಕ್ರಮ ಸಕ್ರಮ' ಸೇರಿ 6 ವಿಧೇಯಕ ಅನುಮೋದನೆ
ಬೆಳಗಾವಿ, ಡಿ. 3 : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಆರನೇ ದಿನವಾದ ಸೋಮವಾರ ಒಟ್ಟು ಆರು ವಿಧೇಯಕಗಳಿಗಳಿಗೆ ಒಪ್ಪಿಗೆ ಪಡೆಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿವಿಧ ಸಚಿವರು ಮಂಡಿಸಿದ ವಿಧೇಯಕಗಳ ಕುರಿತು ಚರ್ಚೆ ನಡೆಸಿದ ಬಳಿಕ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಧ್ವನಿಮತದ ಮೂಲಕ ವಿಧೇಯಕಗಳಿಗೆ ಅನುಮೋದನೆ ನೀಡಿದರು.
ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ, ಕರ್ನಾಟಕ ಸಿವಿಲ್ ಸೇವೆಗಳು (ಜಲಸಂಪನ್ಮೂಲ ಸೇವೆ) (ಸಹಾಯಕ ಎಂಜಿನಿಯರ್‌ಗಳ ಮತ್ತು ಕಿರಿಯ ಎಂಜಿನಿಯರ್‌ಗಳ ವಿಶೇಷ ನೇಮಕಾತಿ) ವಿಧೇಯಕ, ಕೊಳಚೆ ಪ್ರದೇಶಗಳ ತಿದ್ದುಪಡಿ ವಿಧೇಯಕ, ಭೂಕಂದಾಯ ತಿದ್ದುಪಡಿ ವಿಧೇಯಕ, ಮಹಿಳಾ ಆಯೋಗ ತಿದ್ದುಪಡಿ ವಿಧೇಯಕ ಹಾಗೂ ಅಕ್ರಮ- ಸಕ್ರಮ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಪಡೆಯಲಾಗಿದೆ.

ಕರ್ನಾಟಕ ಕೈಗಾರಿಕೆಗಳ ವಿಧೇಯಕ : ಕರ್ನಾಟಕ ಕೈಗಾರಿಕೆಗಳ (ಸೌಲಭ್ಯ) (ತಿದ್ದುಪಡಿ) ವಿಧೇಯಕ 2013ಕ್ಕೆ ಅಧಿವೇಶನದಲ್ಲಿ ಒಪ್ಪಿಗೆ ದೊರಕಿದೆ. ಇದರ ಅನ್ವಯ ರಾಜ್ಯಮಟ್ಟದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲಾಗುತ್ತದೆ. ಇದು ಕೈಗಾರಿಗೆಗಳ ಅನುಮತಿ ಮತ್ತು ಅವುಗಳಿಗೆ ಸಂಬಂಧಿಸಿದ ಕಾರ್ಯಗಳು ತ್ವರಿತವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. (ಅಧಿವೇಶನ : ಸೋಮವಾರ ಸದನದಲ್ಲಿ ಏನಾಯ್ತು?)
ಭೂಕಂದಾಯ ತಿದ್ದುಪಡಿ ವಿಧೇಯಕ : ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್, ಕರ್ನಾಟಕ ಭೂಕಂದಾಯ(ತಿದ್ದುಪಡಿ) ವಿಧೇಯಕ 2013ನ್ನು ಮಂಡಿಸಿದರು. ಪ್ರಸ್ತುತ ರಾಜ್ಯದಲ್ಲಿ ರೈತರು ವ್ಯವಸಾಯ ಮಾಡುತ್ತಿರುವ ಭೂಮಿ ಮಂಜೂರು ಮಾಡಲು ತಾಲೂಕುವಾರು ಬಗರ್ ಹುಕುಂ ಸಮಿತಿಗಳಿದ್ದು, ಪ್ರತಿ ವಿಧಾನಸಭೆ ಕ್ಷೇತ್ರವಾರು ಸಮಿತಿಗಳನ್ನು ರಚಿಸುವ ಉದ್ದೇಶದಿಂದ ಈ ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.
ಕೊಳಚೆ ಪ್ರದೇಶಗಳ ತಿದ್ದುಪಡಿ ವಿಧೇಯಕ : ಕರ್ನಾಟಕ ಕೊಳಚೆ ಪ್ರದೇಶಗಳ ತಿದ್ದುಪಡಿ ವಿಧೇಯಕವನ್ನು ವಸತಿ ಸಚಿವ ಅಂಬರೀಶ್ ಸದನದಲ್ಲಿ ಮಂಡಿಸಿದರು. ಕೊಳಚೆ ನಿರ್ಮೂಲನಾ ಮಂಡಳಿ ಎಂಬ ಹೆಸರು ಬದಲಾವಣೆ ಮಾಡುವವಂತೆ ಬದಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆದ್ದರಿಂದ ಮಂಡಳಿಯನ್ನು ಕೊಳಚೆ ಪ್ರದೇಶಗಳ ಅಭಿವೃದ್ಧಿ ಮಂಡಳಿ ಎಂದು ಬದಲಿಸುವ ಉದ್ದೇಶದಿಂದ ವಿಧೇಯಕ ಮಂಡಿಸಲಾಗಿದೆ ಎಂದು ಸದನಕ್ಕೆ ವಿವರಣೆ ನೀಡಿ ಒಪ್ಪಿಗೆ ಪಡೆದರು.
ಮಹಿಳಾ ಆಯೋಗ ತಿದ್ದುಪಡಿ ವಿಧೇಯಕ : ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಚಿವೆ ಉಮಾಶ್ರೀ ಅವರ ಪರವಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ (ತಿದ್ದುಪಡಿ) ವಿಧೇಯಕವನ್ನು ಮಂಡಿಸಿದರು. ಮಹಿಳಾ ಆಯೋಗದ ಸದಸ್ಯರಲ್ಲಿ ಈ ಹಿಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅವಕಾಶವಿತ್ತು. ತಿದ್ದುಪಡಿ ಮೂಲಕ ಇತರೆ ಹಿಂದುಳಿದ ವರ್ಗದವರಿಗೂ ಅವಕಾಶ ಮಾಡಿಕೊಡಲು ಇದನ್ನು ಮಂಡಿಸಲಾಗಿದೆ.
ಅಕ್ರಮ-ಸಕ್ರಮ ತಿದ್ದುಪಡಿ ವಿಧೇಯಕ : ರಾಜ್ಯಪಾಲರು ಸ್ಪಷ್ಟನೆ ಕೇಳಿ ವಾಪಸ್ ಕಳಿಸಿದ್ದ ಅಕ್ರಮ-ಸಕ್ರಮ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿದೆ. ನಗರ ಪ್ರದೇಶದಲ್ಲಿ ಸರ್ಕಾರಿ ಭೂಮಿ ಅತಿಕ್ರಮಿಸಿಕೊಂಡು ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸಿ, ಅವರಿಗೆ ಭೂ ಮಂಜೂರಾತಿ ಪತ್ರ ನೀಡಲು ಸರ್ಕಾರ ಭೂಕಂದಾಯ ಕಾಯ್ದೆಗೆ ನಿಯಮ 94 ಸಿಸಿ ಮೂಲಕ ತಿದ್ದುಪಡಿ ವಿಧೇಯಕ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ವಿಧೇಯಕದಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ, ಸೋಮವಾರ ಸದನದಲ್ಲಿ ಮಂಡಿಸಿ, ಒಪ್ಪಿಗೆ ಪಡೆಯಲಾಗಿದೆ. (ಅಕ್ರಮ-ಸಕ್ರಮ: ಕೊನೆಗೂ ಭಾಗ್ಯದ ಬಾಗಿಲು ತೆರೆಯಿತು)
ಕರ್ನಾಟಕ ಸಿವಿಲ್ ಸೇವೆಗಳ ವಿಧೇಯಕ : ಕೃಷ್ಣಾ ಮೇಲ್ದಂಡೆ ಯೋಜನೆಗಳ ಕಾಮಗಾರಿಗಳನ್ನು ತ್ವರಿತಗೊಳಿಸಲು 1993-94ನೇ ಸಾಲಿನಲ್ಲಿ ನೇಮಕಗೊಂಡ ಸಹಾಯಕ ಎಂಜಿನಿಯರ್‌ಗಳು ಮತ್ತು ಕಿರಿಯ ಎಂಜಿನಿಯರ್‌ಗಳು ಸೇವೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುವ ಕರ್ನಾಟಕ ಸಿವಿಲ್ ಸೇವೆಗಳು(ಜಲ ಸಂಪನ್ಮೂಲ ಸೇವೆ) (ಸಹಾಯಕ ಎಂಜಿನಿಯರ್‌ಗಳ ಮತ್ತು ಕಿರಿಯ ಎಂಜಿನಿಯರ್‌ಗಳ ವಿಶೇಷ ನೇಮಕಾತಿ) ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ.












Click it and Unblock the Notifications