Belagavi: ಬೆಳಗಾವಿಯಲ್ಲಿ ನವಜಾತಶಿಶು ಕೊಂದ ಪ್ರಕರಣ: ಪ್ರೇಮಿಗಳು ಅಂದರ್
ಬೆಳಗಾವಿ ಮಾರ್ಚ್ 25: ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರ ಬಾರದು ಅನ್ನೋ ಮಾತಿದೆ. ಅದೇ ರೀತಿ ಸಾಕಲು ಧೈರ್ಯ, ತಾಕತ್ತು ಇಲ್ಲದೇ ಇದ್ದರೆ ಮಕ್ಕಳನ್ನು ಹೇರಲು ಹೋಗಬಾರದು. ಬೆಳಗಾವಿಯಲ್ಲಿ ಪ್ರೇಮ ಪಿಶಾಚಿಗಳು ಪೈಚಾಚಿಕ ಕೃತ್ಯ ಎಸಗಿರುವ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಮಗುವೊಂದಕ್ಕೆ ಜನ್ಮ ನೀಡಿ ಅದು ಕಣ್ಣು ತೆರೆದು ಜಗತ್ತು ನೋಡುವ ಮುನ್ನವೇ ಉಸಿರುಗಟ್ಟಿಸಿ ಕೊಂದು ತಿಪ್ಪೆಗೆ ಎಸೆದಿದ್ದಾರೆ.
ಹೌದು.... ಈ ಘಟನೆಯನ್ನು ನೋಡಿದರೆ ಯಾರಿಗೂ ಕೂಡ ಅರಗಿಸಿಕೊಳ್ಳಲು ಆಗುವುದಿಲ್ಲ. ಪ್ರೀತಿ ಪ್ರೇಮ ಅಂತ ಮೈಮರೆತ ಈ ಕ್ರೂರಿಗಳಿಗೆ ಏನು ಮಾಡಬೇಕು ಅನ್ನುವಷ್ಟು ಕೋಪ ಬರುತ್ತೆ. ಅಷ್ಟಕ್ಕೂ ಆಗಿದ್ದೇನು? ಪ್ರೇಮಿಗಳು ಈ ಪ್ರಕರಣದಿಂದ ಕಲಿಯುವುದು ಏನು?

ಬೆಳಗಾವಿಯ ಕಿತ್ತೂರಿನ ಅಂಬಡಗಟ್ಟಿ ಗ್ರಾಮದ ಮಹಾಬಲೆಶ್ ಕಾಮೋಜಿ (31) ಎನ್ನುವ ಯುವಕ ಮತ್ತು ಸಿಮ್ರಾನ್ ಮಾಣಿಕಾಬಾಯ್ (22) ಎನ್ನುವ ಯುವತಿ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಳೆದ ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಹೆತ್ತವರ ಕಣ್ಣು ತಪ್ಪಿಸಿ ಭೇಟಿ ಮಾಡುತ್ತಿದ್ದರು.
ಪ್ರೀತಿ ಮಾಡುವ ವೇಳೆ ಜೋಡಿ ಮಧ್ಯೆ ಹಲವು ಸಲ ದೈಹಿಕ ಸಂಪರ್ಕ ಆಗಿದೆ. ಬಳಿಕ ಯುವತಿ ಸಿಮ್ರಾನ್ ಗರ್ಭಿಣಿ ಆಗಿದ್ದಾಳೆ. ಯುವಕನಿಗೆ ಸರ್ಪೈಸ್ ಕೊಡಲು ಮುಂದಾದಳೋ ಅಥವಾ ಮನೆಯವರಿಗೆ ಗೊತ್ತಾದರೆ ತೊಂದರೆ ಆಗುತ್ತದೆ ಅನ್ನೋ ಭಯದಿಂದಲೂ ಗೊತ್ತಿಲ್ಲ. ಯುವತಿ ಯೂಟ್ಯೂಬ್ ನೋಡಿಕೊಂಡು ತಾನೇ ಹೆರಿಗೆ ಮಾಡಿಕೊಂಡಿದ್ದಾಳೆ.
20 ದಿನಗಳ ಹಿಂದೆ ತಾನೇ ವಿಡಿಯೋ ನೋಡಿಕೊಂಡು ಹೆರಿಗೆ ಮಾಡಿಕೊಂಡು ಆ ಮಗುವನ್ನು ತೆಗೆದುಕೊಂಡು ಹೋಗಿ ಮಹಾಬಲೆಶ್ ಕೈಗೆ ಕೊಟ್ಟಿದ್ದಾಳೆ. ಮಗುವನ್ನು ನೋಡಿ ಖುಷಿ ಪಡೋದನ್ನು ಬಿಟ್ಟು ಇನ್ನೂ ಜಗತ್ತೇ ನೋಡದ ಹಸುಗೂಸನ್ನ ಪಾಪಿ ಪ್ರೇಮಿ ಕೊಂದು ಹಾಕಿದ್ದಾನೆ.
ಅಷ್ಟೇ ಅಲ್ಲ ಆ ಮಗುವನ್ನು ಕೊಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಕವರ್ ಅನ್ನು ತೆಪ್ಪೆಯಲ್ಲಿ ಎಸೆದಿದ್ದಾನೆ. ಮಹಾಬಲೆಶ್ ಕಾಮೋಜಿ ಮಗುವನ್ನು ಕೊಂದು ತಿಪ್ಪೆಗೆ ಎಸೆಯುವಾಗ ತಾಯಿ ಸಿಮ್ರಾನ್ ಅದನ್ನು ತಡೆಯುವ ಪ್ರಯತ್ನ ಕೂಡ ಮಾಡಿಲ್ಲ. ತಮ್ಮದೇ ಮಗುವನ್ನು ತಾವೇ ಕೈಯಾರೆ ಕೊಂದು ನಿರಾಳರಾಗಿ ಮನೆಗೆ ಮರಳಿದ್ದಾರೆ.
ಪ್ಲಾಸ್ಟಿಕ್ ಕವರ್ ಅನ್ನು ನಾಯಿಗಳು ಎಲೆದಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ದಾಖಲಿಸಿಕೊಂಡ ಪೊಲಿಸರು ಮಗುವಿನ ಪೋಷಕರ ಪತ್ತೆಗೆ ಬಲೆ ಬೀಸಿದ್ದರು. ಆಗ ಸ್ಥಳೀಯರ ಮಾಹಿತಿ ಮೇರೆಗೆ ಈ ಪ್ರೇಮ ಜೋಡಿಯನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ.
ಪೊಲೀಸ್ ವಿಚಾರಣೆ ನಡೆಸಿದಾಗ ಈ ಜೋಡಿ ಮಗು ತಮ್ಮದೇ ಎಂದು ಒಪ್ಪಿಕೊಂಡಿದೆ. ಕೊನೆಗೆ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಜೈಲಿಗೆ ಹಾಕಿದ್ದಾರೆ. ಇನ್ನೂ ಜಗತ್ತನೇ ಕಾಣದ ಮಗುವಿನ ಕತ್ತಿಗೆ ಕೈ ಹಾಕುವಷ್ಟು ದ್ವೇಷ ಇವರಿಗೆ ಹೇಗೆ ಬಂತು ಅಂತ ಜನ ಹಿಡಿ ಶಾಪ ಹಾಕುತ್ತಿದ್ದಾರೆ. ತಂದೆ ಈ ಕೃತ್ಯ ಮಾಡುವಾಗ ಹೆತ್ತ ತಾಯಿ ಕೂಡ ಇದನ್ನು ಕಣ್ಣಾರೆ ನೋಡಿ ಸುಮ್ಮನಿರುವುದಕ್ಕೆ ಸ್ಥಳೀಯರು ಮರುಕ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಪ್ರೀತಿ ಪ್ರೇಮ ಅಂತ ಹೋಗಿ ಮೈಮರೆಯುವ ಯುವ ಜೋಡಿಗಳು ಇಂಥಹ ಪ್ರಕರಣಗಳಿಂದಲಾದರೂ ಎಚ್ಚೆತ್ತುಕೊಳ್ಳಬೇಕು. ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿ ಮಾಡಿ, ದುಡುಕಿ ಸಮಾಜಕ್ಕೆ, ಪೋಷಕರಿಗೆ ಕೆಟ್ಟ ಹೆಸರು ತರುವ ಇಂತಹ ಜೋಡಿಗಳಿಂದ ಏನಾಗಬಹುದು ಅನ್ನೋ ಬಗ್ಗೆ ಯುವ ಜನತೆ ಎಚ್ಚೆತ್ತುಕೊಳ್ಳಬೇಕಿದೆ.












Click it and Unblock the Notifications