ಸೊಳ್ಳೆಗೆ ಹೆದರಿ ಸಭಾಪತಿಗೆ ಪತ್ರ ಬರೆದ ವಿಮಲಾಗೌಡ
ಬೆಳಗಾವಿ, ಡಿ. 17: ಸೊಳ್ಳೆ ಕಾಟ ಅನುಭವಿಸುವುದು ಬಡವರ ಹಣೆಬರಹ. ಮನೆ ಪಕ್ಕ ತಿಪ್ಪೆ ಗುಂಡಿಯೇ ದೊಡ್ಡದಾಗುತ್ತಿದ್ದರೂ ತೆಪ್ಪಗೆ ಬುದುಕುವುದನ್ನು ರೂಢಿಸಿಕೊಂಡಿರುತ್ತಾರೆ. ಜನಪ್ರತಿನಿಧಿಗಳಿಗೆ ಹೇಳಿದರೆ ಸರ್ಕಾರ ಎಷ್ಟು ಸೌಲಭ್ಯ ಒದಗಿಸಲು ಸಾಧ್ಯ ಎಂಬ ಪ್ರಶ್ನೆ ಬರುತ್ತದೆ. ಆದರೆ, ಅವರಿಗೇ ಈ ಸಮಸ್ಯೆ ಎದುರಾದರೆ..?
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮಗೆ ಸೊಳ್ಳೆಕಾಟದಿಂದ ಹಿಂಸೆಯಾಗುತ್ತಿದೆ. ಇದರಿಂದ ಮುಕ್ತಿ ಕೊಡಿಸುವಂತೆ ಕೋರಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ವಿಮಲಾಗೌಡ ಅವರು ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಅವರಿಗೆ ಪತ್ರ ಬರೆದಿರುವುದು ಈ ಪ್ರಶ್ನೆ ಹುಟ್ಟುಹಾಕಿದೆ. [ಬೆಳಗಾವಿಯಲ್ಲಿ ಸಾಲು ಸಾಲು ಪ್ರತಿಭಟನೆ]

ವಿಮಲಾಗೌಡ ಅವರು ಪತ್ರದಲ್ಲಿ ಹೀಗೆ ಬರೆದಿದ್ದಾರೆ...
ಮಾನ್ಯ ಸಭಾಪತಿಯವರೇ
ನಾವು ಕುಳಿತುಕೊಳ್ಳುವ ಸೀಟ್ ಕೆಳಗಡೆ ಸೊಳ್ಳೆಗಳ ಮಹಾಪೂರವೇ ಇದೆ. ನಮ್ಮ ಕಾಲುಗಳನ್ನು ಕಚ್ಚಿ ಹಿಂಸಿಸುತ್ತಿದೆ. ಇದು ನನ್ನೊಬ್ಬಳ ಅನುಭವ ಅಲ್ಲ. ಎಲ್ಲ ಸದಸ್ಯರ ಅಭಿಪ್ರಾಯ ಅನುಭವ ಆಗಿದೆ. ನಮಗೆ ನ್ಯಾಯ ಕೊಡಿ please.
ವಿಮಲಗೌಡ
ಸರ್ಕಾರಕ್ಕೇ ಸೊಳ್ಳೆಕಾಟವೇ..? : ಸುವರ್ಣ ವಿಧಾನಸೌಧದೊಳಗೆ ಇಡೀ ಸರ್ಕಾರವೇ ಕುಳಿತು ಸಭೆ ನಡೆಸುವ ಜಾಗದಲ್ಲಿಯೂ ಸೊಳ್ಳೆ ಕಾಟ ಇದೆ ಎಂದರೆ ನಿರ್ವಹಣೆ ಹೇಗಿದೆ ಎಂಬುದನ್ನು ಅರಿಯಬಹುದು.
ಬಹುಶಃ ಇದೇ ಕಾರಣದಿಂದ ಯಾವುದೇ ಸರ್ಕಾರಿ ಕಚೇರಿಯನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲದಿರಬಹುದೇನೋ? "ವಿಧಾನಸೌಧದಲ್ಲಿ ಕೆಲಸ ಮಾಡ್ತೇವೆ" ಎಂಬ ಹೆಗ್ಗಳಿಕೆಗಿಂತ ಸೊಳ್ಳೆ ಕಾಟದ ಭಯವೇ ಅಧಿಕಾರಿಗಳನ್ನು ಹೆಚ್ಚು ಕಾಡಿರಬಹುದು. [10 ದಿನಗಳ ಅಧಿವೇಶನಕ್ಕೆ ನೂರಾರು ಕೋಟಿ ಖರ್ಚು]
ವರ್ಷಕ್ಕೊಮ್ಮೆ ಸ್ನಾನ, ಅಲಂಕಾರ : ಬೆಳಗಾವಿ ನಗರದಿಂದ ದೂರದಲ್ಲಿ ಕಟ್ಟಿರುವ ಸುವರ್ಣ ವಿಧಾನಸೌಧ ವರ್ಷಕ್ಕೊಮ್ಮೆ ಅಧಿವೇಶನದ ಸಂದರ್ಭದಲ್ಲಿ ಸ್ನಾನ ಮಾಡಿಕೊಂಡು, ಅಲಂಕರಿಸಿಕೊಳ್ಳುತ್ತದೆ.
ಕಳೆದ ವರ್ಷದ ಚಳಿಗಾಲದ ಅಧಿವೇಶನ ಸಂದರ್ಭ ಸುವರ್ಣ ವಿಧಾನಸೌಧದ ಮೇಲೆ ಕಟ್ಟಿದ್ದ ಹಸಿರು ಪಾಚಿಯನ್ನು ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗಿತ್ತು. ಅಂತೂ ಸ್ವಚ್ಛಗೊಳಿಸಿ ಬಣ್ಣ ಬಳಿದು ಬಿಳಿಗೊಳಿಸಿದಾಗ ಸಿಬ್ಬಂದಿ 'ಉಸ್ಸಪ್ಪ' ಎಂದಿದ್ದರು.
ಕಟ್ಟಡದಿಂದ ಸುಮಾರು 500 ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಇದೊಂದು ವಿಧಾನಸೌಧ ಎಂಬುದನ್ನು ಕಟ್ಟಡದ ಆಕಾರದಿಂದ ಮಾತ್ರ ಅರಿಯಬೇಕು. ಚಳಿಗಾಲದ ಅಧಿವೇಶನ ಬಿಟ್ಟು ಬೇರೆ ಸಂದರ್ಭದಲ್ಲಿ ಕಟ್ಟಡದ ಸುತ್ತ ಗಿಡಗಂಟಿಗಳೇ ಬೆಳೆದಿರುತ್ತವೆ.
ಆದ್ದರಿಂದ ನೂರಾರು ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿರುವ ಸುವರ್ಣ ವಿಧಾನಸೌಧ ಪ್ರತಿ ವರ್ಷ ಚಳಿಗಾಲದಲ್ಲಿ ಸರ್ಕಾರದ ಪಿಕ್‌ನಿಕ್ ತಾಣದಂತಾಗಿದೆ ಎಂಬ ಆರೋಪ ಸಂಪೂರ್ಣ ಸುಳ್ಳಲ್ಲ.












Click it and Unblock the Notifications