ಬೆಳಗಾವಿಯಲ್ಲಿ ಮತ್ತೆ ಕ್ಯಾತೆ ತೆಗೆದ ಎಂಇಎಸ್
ಬೆಳಗಾವಿ, ಡಿ. 3 : ಬೆಳಗಾವಿಯಲ್ಲಿ ಮಂಗಳವಾರ ಮತ್ತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಪುಂಡಾಟಿಕೆ ನಡೆಸಿದೆ. ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ವೇಳೆ ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿ, ರಾಜ್ಯ ಸರ್ಕಾರ, ಕನ್ನಡಿಗರ ವಿರುದ್ಧ ಧಿಕ್ಕಾರ ಕೂಗಿದೆ. ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.
ಬೆಳಗಾವಿ ಅಧಿವೇಶನದ ಮಂಗಳವಾರದ ಕಲಾಪಕ್ಕೆ ಗೈರು ಹಾಜರಾಗಿರುವ ಸಂಭಾಜಿ ಪಾಟೀಲ್, ಎಂಇಎಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸಿ ಕಚೇರಿ ಆವರಣದಲ್ಲಿ ಕನ್ನಡಿಗರ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಮ್ಮ ಕಚೇರಿ ಮೇಲೆ ದಾಳಿ ಮಾಡಿದ ಕನ್ನಡ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. (ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆ)

ನ.25ರಂದು ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮಹಾಮೇಳವ ಸಮ್ಮೇಳನದಲ್ಲಿ "ಎಂಇಎಸ್ ನಲ್ಲಿ ನಾಲ್ವರು ಶಾಸಕರಿದ್ದಿದ್ದರೆ ಇಂದು ಕರ್ನಾಟಕದ ಶವಯಾತ್ರೆ ಮಾಡುತ್ತಿದ್ದೆ" ಎಂದು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ನ.26ರಂದು ಬೆಳವಾವಿಯಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಭಾಜಿ ಪಾಟೀಲ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದವು. (ಬೆಳಗಾವಿಯಲ್ಲಿ ಕನ್ನಡ ಕಾರ್ಯಕರ್ತರಿಗೆ ಲಾಠಿ ಏಟು)
ಮಂಗಳವಾರ ಪ್ರತಿಭಟನೆ ನಡೆಸುತ್ತಿರುವ ಎಂಇಎಸ್ ಕಾರ್ಯಕರ್ತರು ಸಂಭಾಜಿ ಪಾಟೀಲ್ ಕಚೇರಿ ಮೇಲೆ ದಾಳಿ ಮಾಡಿದ ಕನ್ನಡ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇತ್ತ ಬುಧವಾರ ಬೆಂಗಳೂರಿನಿಂದ ಬೆಳಗಾವಿವರೆಗೆ ಸಂಭಾಜಿ ಪಾಟೀಲ್ ಅವರ ಶವಯಾತ್ರೆ ಮಾಡಲು ಕನ್ನಡ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ. (ಬುಧವಾರದಿಂದ ಸಂಭಾಜಿ ಪಾಟೀಲ್ ಶವಯಾತ್ರೆ)












Click it and Unblock the Notifications