ವೈರಲ್ ಆಡಿಯೋದಲ್ಲಿ ಹೆಸರು: ಬೆಳಗಾವಿ ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮಿ ಆತ್ಮಹತ್ಯೆ
ಬೆಳಗಾವಿ, ಸೆಪ್ಟೆಂಬರ್ 5 : ಬೆಳಗಾವಿಯ ಗುರು ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮಿ ನೇಣಿಗೆ ಶರಣಾಗಿದ್ದಾರೆ. ಇತ್ತೀಚೆಗೆ ಇಬ್ಬರ ಮಹಿಳೆಯರ ನಡುವಿನ ಸಂಭಾಷಣೆ ವೈರಲ್ ಆಗಿತ್ತು. ಹಲವು ಮಠದ ಸ್ವಾಮೀಜಿಗಳ ವಿರುದ್ಧ ಮಹಿಳೆಯರು ಮಾತನಾಡಿದ್ದರು. ಅದರಲ್ಲಿ ಬಸವಸಿದ್ಧಲಿಂಗ ಸ್ವಾಮಿಯವರ ಹೆಸರೂ ಕೇಳಿ ಬಂದಿತ್ತು.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿಯಾಗಿರುವ ಬಸವ ಸಿದ್ಧಲಿಂಗ ಸ್ವಾಮೀಜಿ ಮಠದ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಇಬ್ಬರು ಮಹಿಳೆಯರ ನಡುವಿನ ಟೆಲಿಫೋನ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುರುಘಾ ಮಠದ ಶಿವಾಮೂರ್ತಿ ಶರಣರ ಮೇಲಿನ ಅತ್ಯಾಚಾರ ಆರೋಪದ ಕುರಿತು ಇಬ್ಬರು ಮಹಿಳೆಯರು ಮಾತನಾಡುತ್ತಿದ್ದರು. ರಾಜ್ಯದ ಹಲವು ಮಠಾಧೀಶರು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಒಂದು ಮಹಿಳೆ ಸಂಭಾಷಣೆಯಲ್ಲಿ ಆರೋಪಿಸುತ್ತಾರೆ. ಆ ಸಂಭಾಷಣೆಯ ನಡುವೆ ಬಸವಸಿದ್ಧಲಿಂಗ ಸ್ವಾಮಿಯವರ ಹೆಸರನ್ನು ಮಹಿಳೆ ಉಲ್ಲೇಖಿಸುತ್ತಾರೆ.

ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣದಿಂದಲೇ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗುತ್ತಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ಇದುವರೆಗೂ ತಿಳಿದುಬಂದಿಲ್ಲ. ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಯಾವ ಕಾರಣ ನೀಡಿದ್ದಾರೆ ಎಂಬುದನ್ನು ಪೊಲೀಸರು ಬಹಿರಂಗಗೊಳಿಸಿಲಿಲ್ಲ.
ಮುರುಘಾ ಶರಣರ ಬಂಧನವಾಗಿರುವ ಸಂದರ್ಭದಲ್ಲಿ ಇಬ್ಬರು ಮಹಿಳೆಯರ ನಡುವಿನ ಸಂಭಾಷಣೆ ವೈರಲ್ ಆಗಿದೆ. ಈ ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾವಿಧಾರಿಗಳ ಬಗ್ಗೆ ನಾನಾ ನೆಗೆಟಿವ್ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇಬ್ಬರು ಹೆಂಗಸರು ಪರಸ್ಪರ ಮಾತನಾಡಿಕೊಂಡಿರುವ ಆಡಿಯೋ ಇದಾಗಿದ್ದು, ಕರ್ನಾಟಕದ ಹಲವು ಸ್ವಾಮೀಜಿಗಳ ಮೇಲೆ ಆರೋಪಿಸಿದ್ದಾರೆ. ರಾಜ್ಯದ ಹಲವು ಮಠಗಳ ಸ್ವಾಮೀಜಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಹಾಳು ಮಾಡಿದ್ದಾರೆ. ಬಹಳಷ್ಟು ಜನ ಕೆಟ್ಟವರೇ ಎಂದು ಮಹಿಳೆಯರಿಬ್ಬರ ಮಾತನಾಡಿಕೊಂಡಿದ್ದಾರೆ.

ಬೆಳಗಾವಿಯ ಸತ್ಯಕ್ಕ ಎಂದು ಹೇಳಿಕೊಂಡಿರುವ ಮಹಿಳೆಯೊಬ್ಬರು ಗಂಗಾವತಿಯ ಇನ್ನೊಬ್ಬ ಮಹಿಳೆ ಜೊತೆಗೆ ಮೊಬೈಲ್‌ನಲ್ಲಿ ಮಾತನಾಡಿದ್ದಾರೆ. ಹೆಣ್ಮಕ್ಳನ್ನ ಲೈಂಗಿಕ ಚಟುವಟಿಕೆಗೆ ಬಳಸಿಕೊಳ್ಳುವ ರಾಜ್ಯದ ಮಠಗಳು, ಸ್ವಾಮೀಜಿಗಳ ಹೆಸರುಗಳನ್ನು ಸಹ ಬಹಿರಂಗವಾಗಿ ಹೇಳಿಕೊಂಡಿದ್ದರು.
ಸ್ವಾಮೀಜಿಯೊಬ್ಬರು ಶಿರಸಿಯ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಬಳಿಕ ಆಕೆ ಪ್ರಗ್ನೆಂಟ್ ಆಗಿದ್ದಳು. ಸ್ವಾಮೀಜಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿ ಬರುವುದರೊಳಗೆ ಪೋಷಕರು ಆ ಯುವತಿಗೆ ಲೆಕ್ಚರರ್ ಒಬ್ಬರ ಜೊತೆ ಮದುವೆ ಮಾಡಿಕೊಟ್ಟರು. ಮಠದ ಸ್ವಾಮಿಗಳೇ ಮದ್ವೆ ಮಾಡಿಕೊಟ್ರು. 40 ಲಕ್ಷ ಮೌಲ್ಯದ ಮನೆ, ಕಾರು ಕೊಟ್ಟರು. ಅವಳಿಗೆ ತಿಂಗಳು-ತಿಂಗಳು ಇಂತಿಷ್ಟು ಅಂತ ಹಣ ನೀಡುತ್ತಿದ್ದರು. ಹೀಗೆ ಕರ್ನಾಟಕದ ಹಲವು ಸಮುದಾಯದ ಸ್ವಾಮೀಜಿಗಳ ಹೆಸರಿಸಿದ್ದಾರೆ.
ಆದ್ರೆ, ಮಹಿಳೆಯರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅವರಿಬ್ಬರು ಯಾರು? ಏನು? ಎನ್ನುವ ಖಚಿತ ಮಾಹಿತಿ ಇಲ್ಲ. ಆದರೆ, ಆಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಇದು ಕೇವಲ ಆರೋಪವಾಗಿದ್ದು, ಇದರ ಬಗ್ಗೆ ಯಾವುದೇ ಪುರಾವೆ ದೊರೆತಿಲ್ಲ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications