ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ, ಜನವರಿ 27; ದೇಶಾದ್ಯಂತ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆಯನ್ನು ಸಂಗ್ರಹ ಮಾಡಲಾಗುತ್ತಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಎನ್ನುವ ಹೆಸರಿನಲ್ಲಿ ನಿಧಿ ಸಂಗ್ರಹಣ ನಡೆಯುತ್ತಿದ್ದು, ಜನರು ತಮ್ಮ ಕೈಲಾದಷ್ಟು ದೇಣಿಗೆಯನ್ನು ನೀಡುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ 2 ಲಕ್ಷ ರೂಪಾಯಿ ದೇಣಿಯನ್ನು ನೀಡಿದ್ದಾರೆ. ರಾಮ ಮಂದಿರ ನಿಧಿ ಸಂಗ್ರಹಣೆ ಮಾಡುವವರು ಶಾಸಕಿಯ ಮನೆಗೆ ಭೇಟಿ ನೀಡಿದ್ದರು. ಆಗ ಎರಡು ಲಕ್ಷ ರೂಪಾಯಿ ಚೆಕ್ ಹಸ್ತಾಂತರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕಿಯ ಸಹೋದರ ಚನ್ನರಾಜ ಹಟ್ಟಿಹೊಳಿ, ವಿದ್ಯಾಭಾರತಿ ಕರ್ನಾಟಕ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿಶ್ವಹಿಂದೂ ಪರಿಷತ್ ಸಹಕೋಶಾಧ್ಯಕ್ಷ ಕೃಷ್ಣ ಭಟ್, ಜಿಲ್ಲಾ ವ್ಯವಸ್ಥಾ ಪ್ರಮುಖ್ ವಿಶಾಲ ಖಂಡಾಗಳೆ ಮುಂತಾದವರು ಉಪಸ್ಥಿತರಿದ್ದರು.
"ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 45 ದಿನಗಳ ಕಾಲ ದೇಣಿಗೆ ಸಂಗ್ರಹ ಅಭಿಯಾನ ನಡೆಯಲಿದೆ" ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಟ್ರಸ್ಟಿಯೂ ಆಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
"ನಿಧಿ ಸಂಗ್ರಹದಲ್ಲಿ ಲೋಪದೋಷವಾಗಬಾರದು. ಹಣ ದುರುಪಯೋಗವಾಗಬಾರದು ಎಂಬ ಕಾರಣಕ್ಕೆ ವಿಶ್ವಹಿಂದೂ ಪರಿಷತ್‌ಗೆ ಜವಾಬ್ದಾರಿ ನೀಡಲಾಗಿದೆ. ವಿಶ್ವಹಿಂದೂ ಪರಿಷತ್ ಕಾರ್ಯಕರತರ ಪಡೆ ಪ್ರತಿ ಮನೆಗೂ ಭೇಟಿ ನೀಡಲಿದ್ದಾರೆ" ಎಂದು ಸ್ವಾಮೀಜಿ ತಿಳಿಸಿದ್ದಾರೆ.
"45 ದಿನಗಳ ಕಾಲ ಅಭಿಯಾನ ನಡೆಯಲಿದೆ. ಜನರು ಭಕ್ತಿ ಪೂರ್ವಕವಾಗಿ ದೇಣಿಗೆ ನೀಡಬಹುದಾಗಿದೆ. ಎಲ್ಲರನ್ನೂ ಒಳಗೊಂಡು ರಾಮ ಮಂದಿರ ನಿರ್ಮಿಸಬೇಕು ಎಂಬ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡಲಾಗುತ್ತಿದೆ" ಎಂದು ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.












Click it and Unblock the Notifications