Krishna River: ಕೃಷ್ಣಾ ನದಿ ಒಳಹರಿವು ಹೆಚ್ಚಳ: ಬೆಳಗಾವಿ ಜಿಲ್ಲೆಯ ಹಲವೆಡೆ ಸೇತುವೆಗಳು ಜಲಾವೃತ
ಬೆಳಗಾವಿ, ಜುಲೈ, 07: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದು ಅವಾಂತರಗಳನ್ನೇ ಸೃಷ್ಟಿಸಿದ್ದಾನೆ. ಹಾಗೆಯೇ ಬೆಳಗಾವಿ ಜಿಲ್ಲೆಯಲ್ಲೂ ಕೂಡ ಭಾರೀ ಮಳೆಯಿಂದ ಹಳ-ಕೊಳ್ಳ-ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಇದರಿಂದ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಅಲ್ಲದೆ, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿದೆ. ಕೃಷ್ಣಾ, ವೇದಗಂಗಾ ಹಾಗೂ ದೂದಗಂಗಾ ನದಿಗಳು ಮೈದುಂಬಿ ಹರಿಯುತ್ತಿರುವ ಪರಿಣಾಮ ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತವಾದ ಘಟನೆ ನಡೆದಿದ್ದು, ಜನರ ಸಂಚಾರ ಅಸ್ತವ್ಯಸ್ತವಾಗಿದೆ.

ಭಾರೀ ಮಳೆಯಿಂದ ದೂದಗಂಗಾ ನದಿಯಿಂದ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ಇನ್ನು ಕೃಷ್ಣಾ ನದಿಗೆ ಸುಮಾರು 55 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರಿನ ಒಳಹರಿವು ಇದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ನದಿ ಪಾತ್ರದ ಜನರಿಗೆ ಸೂಚನೆ ನೀಡಲಾಗಿದೆ.
ಕೃಷ್ಣಾ ಒಳಹರಿವಿನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ನದಿ ಪಾತ್ರದ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಲ್ಲದೆ, ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ. ಮತ್ತೊಂದೆಡೆ ಪ್ರವಾಹದ ಭೀತಿ ಎದುರಾಗಿದ್ದರೂ ಕೂಡ ಇಲ್ಲಿಯವರೆಗೂ ಒಂದೇ ಒಂದು ಕಾಳಜಿ ಕೇಂದ್ರವನ್ನು ಕೂಡ ತೆರೆದಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಸ್ಥಳಿಯರು ಆಕ್ರೊಶ ಹೊರಹಾಕುತ್ತಿದ್ದಾರೆ.
47 ಕೆರೆಗಳಿಗೆ ನೀರು: ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ತುಂಬಿಸಲು ಪ್ರಾಯೋಗಿಕ ಹರಿವು ಆರಂಭಿಸಲಾಗಿದೆ.
ತುಂಗಭದ್ರಾ ನದಿಗೆ ದೀಟೂರು ಬಳಿ ನಿರ್ಮಿಸಿರುವ ಪಂಪ್‌ಹೌಸ್ ಮತ್ತು ಜಗಳೂರು ತಾಲ್ಲೂಕಿನ ತುಪ್ಪದಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ವೀಕ್ಷಣೆ ಮಾಡಿದರು.
ಜಗಳೂರು ತಾಲ್ಲೂಕಿನ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯನ್ನು 660.34 ಕೋಟಿ ರೂಪಾಯಿಯಲ್ಲಿ ಕೈಗೊಂಡು 2019ರ ಡಿಸೆಂಬರ್ 9ರಿಂದ ಕಾಮಗಾರಿ ಆರಂಭಿಸಲಾಗಿದೆ. ಯೋಜನೆಯಡಿ 1.379 ಟಿಎಂಸಿ ನೀರು ಮಳೆಗಾಲದಲ್ಲಿ ಬಳಕೆ ಮಾಡಿಕೊಂಡು ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ.
ಈ ಯೋಜನೆಯಿಂದ 65 ಗ್ರಾಮಗಳಿಗೆ ಅನುಕೂಲ ಆಗಲಿದ್ದು 1 ಲಕ್ಷ ರೈತರಿಗಿಂತ ಹೆಚ್ಚು ಜನರಿಗೆ ಉಪಯೋಗ ಆಗುವುದರ ಜೊತೆಗೆ ತಾಲ್ಲೂಕಿನ ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಯೋಜನೆಯಡಿ 220.68 ಕಿಲೋ ಮೀಟರ್ ಮುಖ್ಯ ಪೈಪ್ ಲೈನ್ ಉದ್ದ ಇರಲಿದೆ.
ಎಂ.ಎಸ್ ಪೈಪ್ 142.62 ಕಿಲೋ ಮೀಟರ್ ಇದ್ದು, 115 ಕಿಲೋ ಮೀಟರ್ ಅಳವಡಿಸಲಾಗಿದೆ. ಜಾಕ್ ವೆಲ್ ಮತ್ತು ಪಂಪ್ ಹೌಸ್ ಕಾಮಗಾರಿ ಮುಗಿದಿರುವುದರಿಂದ ಈಗಾಗಲೇ ನೀರೆತ್ತುವ ಪ್ರಾಯೋಗಿಕ ಕಾರ್ಯ ಆರಂಭಿಸಲಾಗಿದ್ದು, ಪ್ರಸಕ್ತ ಮುಂಗಾರಿನಲ್ಲಿ 30 ಕೆರೆಗಳಿಗೆ ನೀರು ಪಂಪ್ ಮಾಡಿ ಭರ್ತಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ.ತಿಳಿಸಿದರು. ಈ ವೇಳೆ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications