ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿದೆ ಪ್ರಮುಖ ಸರ್ಕಾರಿ ಕಛೇರಿ
ಬೆಳಗಾವಿ, ನವೆಂಬರ್ 04: ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಸರ್ಕಾರಿ ಕಛೇರಿಗಳ ಸ್ಥಳಾಂತರವಾಗಬೇಕು. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕಟ್ಟಿದ ಕಟ್ಟಡವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂಬ ಬೇಡಿಕೆ ಇದೆ. ಆದರೆ ಇದು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಬೆಳಗಾವಿ ಭಾಗದ ಜನರ, ಕನ್ನಡ ಪರ ಸಂಘಟನೆಗಳ ಕೂಗಿಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.
ವರ್ಷಕ್ಕೊಮ್ಮೆ ಚಳಿಗಾಲದ ಅಧಿವೇಶನ ನಡೆಯುವುದು ಬಿಟ್ಟರೆ ವರ್ಷಪೂರ್ತಿ ಬೆಳಗಾವಿಯ ಸುವರ್ಣ ವಿಧಾನಸೌಧ ಖಾಲಿ ಖಾಲಿಯಾಗಿರುತ್ತದೆ. ಆದರೆ ಈ ಸರ್ಕಾರ ಪ್ರಮುಖ ಸರ್ಕಾರಿ ಕಛೇರಿಯೊಂದರ ಪ್ರಾದೇಶಿಕ ಕಛೇರಿಯನ್ನು ಸುವರ್ಣ ವಿಧಾನಸೌಧದಲ್ಲಿ ಆರಂಭಿಸಲು ಮುಂದಾಗಿದೆ. ಈ ಕುರಿತು ಶೀಘ್ರವೇ ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಸಲಹೆಯೊಂದನ್ನು ನೀಡಿತ್ತು. ಈ ಸಲಹೆಯನ್ನು ಜಾರಿಗೊಳಿಸಲು ಸಭೆಯಲ್ಲಿ ಪ್ರಾಥಮಿಕವಾಗಿ ಒಪ್ಪಿಗೆ ನೀಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಲ್ಲಿಯೇ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಸರ್ಕಾರಿ ಕಛೇರಿಯೊಂದು ಸ್ಥಳಾಂತರವಾಗಲಿದೆ.
ಬೆಂಗಳೂರಿನಲ್ಲಿ ಸಭೆ: ದಶಕಗಳ ಕಾಲದಿಂದ ಬೆಳಗಾವಿಯ ಕನ್ನಡ ಪರ ಸಂಘಟನೆಗಳು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಛೇರಿಯನ್ನು ಬೆಳಗಾವಿಯಲ್ಲಿ ತೆರೆಯಬೇಕು ಎಂದು ಬೇಡಿಕೆ ಇಡುತ್ತಿದೆ. ಇದರಿಂದಾಗಿ ಮಹಾರಾಷ್ಟ್ರ ಎತ್ತುವ ಗಡಿತಂಟೆಗೆ ತಕ್ಕ ಉತ್ತರ ನೀಡಿದಂತೆ ಆಗುತ್ತದೆ ಎಂದು ಒತ್ತಾಯಿಸಲಾಗುತ್ತಿದೆ.
ಸೆಪ್ಟೆಂಬರ್ 13ರಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಭೆ ಬೆಂಗಳೂರಿನಲ್ಲಿ ನಡೆದಿತ್ತು. ಸಭೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಛೇರಿ ತೆರೆಯುವ ಕುರಿತು ಚರ್ಚೆಗಳು ನಡೆದಿದೆ. ಸಭೆಯಲ್ಲಿ ಈ ಪ್ರಸ್ತಾವನೆಗೆ ಪ್ರಾಥಮಿಕ ಒಪ್ಪಿಗೆಯೂ ಸಿಕ್ಕಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ್ ಚಂದರಗಿ ಮಂಡಿಸಿದ ಪ್ರಸ್ತಾವನೆಗೆ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಸದ್ಯ ಪ್ರಾಧಿಕಾರದ ಕಛೇರಿ ಬೆಂಗಳೂರು ನಗರದಿಂದ ಕೆಲಸ ನಿರ್ವಹಣೆ ಮಾಡುತ್ತಿದೆ. ಪ್ರಾಧಿಕಾರ ತನ್ನ ಮೊದಲ ಪ್ರಾದೇಶಿಕ ಕಛೇರಿಯನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತೆರೆಯಲಿದೆ. ಬಳಿಕ ಕಲಬುರಗಿ, ಮೈಸೂರು, ಮಂಗಳೂರು ನಗರದಲ್ಲಿ ಕಛೇರಿ ತೆರೆಯಲು ತೀರ್ಮಾನಿಸಲಾಗಿದೆ.
ಬೆಳಗಾವಿಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಛೇರಿ ಆರಂಭವಾಗುವುದು ಈ ಭಾಗದ ಜನರ ಹೋರಾಟಕ್ಕೆ ಬಹಳ ದೊಡ್ಡ ಗೆಲುವು. ಪದೇ ಪದೇ ಗಡಿ ತಂಟೆ ಮಾಡುವವರಿಗೆ ಇದು ತಕ್ಕ ಉತ್ತರವನ್ನು ನೀಡಲಿದೆ. ಕನ್ನಡ ಪರ ಹೋರಾಟಗಾರರ ಬೇಡಿಕೆಗೂ ಮನ್ನಣೆ ಸಿಕ್ಕಂತೆ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ 2020ರಲ್ಲಿ ರಾಜ್ಯ ಮಾಹಿತಿ ಆಯೋಗದ ಕಛೇರಿ ಆರಂಭವಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ಕಛೇರಿ 2024ರಲ್ಲಿ ತೆರೆಯಲಾಗಿದೆ. ಈ ವರ್ಷ ಕರ್ನಾಟಕ ಗಡಿ ಹಾಗೂ ನದಿಗಳ ರಕ್ಷಣಾ ಆಯೋಗದ ಪ್ರಾದೇಶಿಕ ಕಛೇರಿಯೂ ಆರಂಭವಾಗಿದೆ. ಈಗ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಛೇರಿ ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ.
ಚಳಿಗಾಲದ ಅಧಿವೇಶನ: ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧೀವೇಶನವನ್ನು ನಡೆಸಲು ತಯಾರಿ ನಡೆಸಲಾಗುತ್ತಿದೆ. ಡಿಸೆಂಬರ್ 10ರ ಬಳಿಕ ಹತ್ತು ದಿನಗಳ ಕಾಲ ಅಧಿವೇಶನ ನಡೆಯುವ ನಿರೀಕ್ಷೆ ಇದೆ. ದಿನಾಂಕವನ್ನು ಸಚಿವ ಸಂಪುಟ ಸಭೆಯಲ್ಲಿ ನಿಗದಿ ಮಾಡಲಾಗುತ್ತದೆ.
ಕರ್ನಾಟಕ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದ ಕುರಿತ ಪೂರ್ವ ಸಿದ್ಧತಾ ಸಭೆಯನ್ನು ಬೆಳಗಾವಿ ಜಿಲ್ಲಾಡಳಿತ ಜೊತೆ ನಡೆಸಿದ್ದಾರೆ.
ಅಧಿವೇಶನಕ್ಕೆ ಆಗಮಿಸುವ ಮುಖ್ಯಮಂತ್ರಿ, ಸಚಿವರು, ಶಾಸಕರುಗಳಿಗೆ ಯಾವುದೇ ರೀತಿಯ ಅನಾನೂಕುಲವಾಗದಂತೆ ತಯಾರಿಯನ್ನು ಕೈಗೊಳ್ಳಬೇಕು. ಅಧಿವೇಶನಕ್ಕೆ ಬರುವಂತಹ ಸಚಿವರು, ಶಾಸಕರು, ಸಚಿವಲಾಯದ ಅಧಿಕಾರಿ, ಸಿಬ್ಬಂದಿಗಳು, ಚಾಲಕರಿಗೆ ಹಾಗೂ ಪೋಲಿಸ್ ಅಧಿಕಾರಿ ಸಿಬ್ಬಂದಿಗಳಿಗೆ ವ್ಯವಸ್ಥಿತ ವಸತಿ, ಊಟದ ವ್ಯವಸ್ಥೆಯಾಗಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications