Belagavi Rain: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಬೆಳಗಾವಿಯ ಹಲವೆಡೆ ತಂಪೆರೆದ ವರುಣ
ಬೆಳಗಾವಿ, ನವೆಂಬರ್ 08: ಬರ ಮತ್ತು ಬಿರು ಬೇಸಿಗೆಯಿಂದ ಕಂಗೆಟ್ಟಿದ್ದ ಬೆಳಗಾವಿ ಜಿಲ್ಲೆಗೆ ವರುಣ ತಂಪೆರೆದಿದ್ದಾನೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಹಲೆವೆಡೆ ಇಂದು(ನವೆಂಬರ್ 08)ರ ಮುಂಜಾನೆಯಿಂದಲೂ ತುಂತುರು ಮಳೆಯಾಗುತ್ತಿದೆ.
ಇಂದು ಬೆಳಗಿನ ಜಾವದಿಂದಲೇ ಆರಂಭವಾಗಿರುವ ಮಳೆ ಈವರೆಗೂ ಮುಂದುವರಿದಿದ್ದು, ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿರುಸಿನ ಮಳೆಯಾಗುತ್ತಿದೆ. ಕಳೆದರೆಡು ದಿನಗಳ ಹಿಂದೆ ಹುಬ್ಬಳ್ಳಿ-ಧಾರವಾಡ, ಕಾರವಾರ ಮತ್ತು ದಾಂಡೇಲಿ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಾವಿ ಜನರೂ ಕೂಡ ಮಳೆ ಆಗಮನದ ನಿರೀಕ್ಷೆಯಲ್ಲಿದ್ದರು.

ಎರಡು ದಿನಗಳ ನಂತರ ಬೆಳಗಾವಿ ನಗರ ಮತ್ತು ಪಶ್ಚಿಮಘಟ್ಟದ ಖಾನಾಪುರ ತಾಲೂಕಿನಲ್ಲಿ ಮಳೆಯಾಗುತ್ತಿದೆ. ಇಡೀ ಜಿಲ್ಲೆಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಖಡೇಬಜಾರ್ ಪ್ರದೇಶ, ನೆಹರೂ ನಗರ, ನ್ಯೂ ಗಾಂಧಿ ನಗರ, ಇಂದಿರಾ ನಗರ, ಗಾಂಧಿ ನಗರ, ಸದಾಶಿವ ನಗರ, ಪಾಟೀಲ ಚಾಳ್, ಕಾಲೇಜ್ ರಸ್ತೆ, ವಡಗಾವಿ , ಟಿಳಕವಾಡಿ, ಕೆಎಲ್‌ಇ ವಿಶ್ವವಿದ್ಯಾಲಯದ ಹಾಗೂ ಶಹಾಪುರದ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.
ಒಂದೆಡೆ ಜಿಲ್ಲೆಯಲ್ಲಿ ಏಕಾಏಕಿ ಆದ ಮಳೆಯಿಂದ ಬಿಸಿಲಿನಿಂದ ಕಂಗೆಟ್ಟ ಜನರು ಸಂತಸ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಬೆಳ್ಳಂಬೆಳಗ್ಗೆ ಸುರಿದ ಮಳೆಯಿಂದ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಕಚೇರಿಗೆ ತೆರಳುತ್ತಿದ್ದವರು, ಹಾಗೂ ವ್ಯಾಪಾರಿಗಳು ಪರದಾಡುವಂತಾಯಿತು.
ಈ ಬಾರಿ ಸುರಿದ ಮುಂಗಾರು ಮಳೆಯಿಂದ ರೈತರಿಗೆ ಹಾಗೂ ಬೆಳೆಗಳಿಗೆ ಯಾವುದೇ ಉಪಯೋಗವಾಗಿರಲಿಲ್ಲ. ಕೈ ಕೊಟ್ಟ ಮಳೆ ಹಾಗೂ ಬರದದಿಂದ ಜಿಲ್ಲೆಯಲ್ಲಿ ಈ ಬಾರಿ ಗೆ ಹಿಂಗಾರು ಬಿತ್ತನೆ ಇನ್ನೂ ಆಗಿಲ್ಲ. ಹೀಗಾಗಿ ಈ ಸುರಿಯುತ್ತಿರುವ ಮಳೆ ಬೇಸಿಗೆಯ ಬೇಗೆ ಆರಿಸಿಕೊಳ್ಳಲು ತಂಪು ವಾತಾವರಣ ಸೃಷ್ಟಿಸುವಲ್ಲಿ ಪಾತ್ರವಹಿಸಿದೆ. ಆದರೆ ಜಿಲ್ಲೆಯಲ್ಲಿ ಮೂರು-ನಾಲ್ಕು ದಿನ ನಿರಂತರ ಮಳೆಯಾದರೆ ಮಾತ್ರ ಅಂತರ್ಜಲ ಹೆಚ್ಚಾಗಲು ಹಾಗೂ ಕೆರೆಕಟ್ಟೆಗೆ ಜೀವಕಳೆ ತುಂಬಲು ಸಾಧ್ಯವಾಗಲಿದೆ.












Click it and Unblock the Notifications