ಬೆಳಗಾವಿ; ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಿದ್ಧತೆ
ಬೆಳಗಾವಿ, ಜುಲೈ 30: ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ನಡೆಯಲಿದ್ದು ಪೂರ್ವ ಸಿದ್ಧತೆ ಆರಂಭಿಸಲಾಗಿದೆ. ಈ ಕಾರ್ಯಕ್ರಮಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ 2 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ನಡೆಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ ಮುಂತಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, "ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಶತಮಾನೋತ್ಸವವನ್ನು ಆಚರಿಸಲಾಗುವುದು" ಎಂದು ಹೇಳಿದರು.
"ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗಾಗಿ ಹಾಗೂ ಅಧಿವೇಶನದ ಕೊಡುಗೆಯನ್ನು ಸ್ಮರಿಸಲು ಅನುಕೂಲವಾಗುವಂತೆ ಬಜೆಟ್‌ನಲ್ಲಿ 2 ಕೋಟಿ ರೂಪಾಯಿ ಅನುದಾನವನ್ನು ಒದಗಿಸಿರುತ್ತದೆ. ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗುವುದು" ಎಂದರು.
ಕಾರ್ಯಕ್ರಮಕ್ಕೆ ಸಲಹೆಗಳು: "ಶತಮಾನೋತ್ಸವ ಆಚರಣೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸರಕಾರದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಗಾಂಧೀಜಿಯವರ ಜೀವನ ಮತಗತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ಇರುವ ಪರಿಣಿತರ ಹಾಗೂ ಅಧಿಕಾರಿಗಳ ಸಮಿತಿಯನ್ನು ಕೂಡ ಸರಕಾರ ರಚಿಸಲಿದೆ" ಎಂದು ಮೊಹಮ್ಮದ್ ರೋಷನ್ ತಿಳಿಸಿದರು.
ಸಭೆಯಲ್ಲಿ ಸಲಹೆಗಳನ್ನು ನೀಡಿದ ದಿಲೀಪ್ ಕಾಮತ್, "ಕಾಂಗ್ರೆಸ್ ಅಧಿವೇಶನ ಸಂದರ್ಭದಲ್ಲಿ ಅಂಗೀಕರಿಸಲಾದ ಗೊತ್ತುವಳಿಗಳ ಕಿರು ಹೊತ್ತಿಗೆಯನ್ನು ಪ್ರಕಟಿಸಬೇಕು ಮತ್ತು ಅಧಿವೇಶನದ ಮಹತ್ವ ಅರಿತುಕೊಳ್ಳಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು" ಎಂದರು.
ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ. ಸರಜೂ ಕಾಟ್ಕರ್ ಮಾತನಾಡಿ, "ಶತಮಾನೋತ್ಸವದ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಬೇಕು. ಅಧಿವೇಶನದ ದಾಖಲೆಗಳು, ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು ಮತ್ತು ಟಿಳಕವಾಡಿಯಲ್ಲಿರುವ ವೀರಸೌಧವನ್ನು ಪುನರುಜ್ಜೀವನಗೊಳಿಸಬೇಕು" ಎಂದು ಹೇಳಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರವೀಂದ್ರ ದೇಶಪಾಂಡೆ ಹಾಗೂ ಕಾರ್ಯದರ್ಶಿ ಸುಭಾಸ್ ಕುಲಕರ್ಣಿ ಮಾತನಾಡಿ, "ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಕಾರಣೀಭೂತರಾದ ಗಂಗಾಧರ ರಾವ್ ದೇಶಪಾಂಡೆ ಅವರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಶತಮಾನೋತ್ಸವದ ಅನುದಾನದಲ್ಲಿ 50 ಲಕ್ಷ ರೂಪಾಯಿ ಒದಗಿಸಬೇಕು" ಎಂದು ಮನವಿ ಮಾಡಿದರು.
"ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ಇದರ ಬಗ್ಗೆ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಯಾವುದೇ ಉಲ್ಲೇಖವಿರುವುದಿಲ್ಲ. ಅಧಿವೇಶನದ ದಾಖಲೆ, ಛಾಯಾಚಿತ್ರ ಹಾಗೂ ಗೊತ್ತುವಳಿಗಳ ಬಗ್ಗೆ ಸಬರಮತಿ ಆಶ್ರಮದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸಬೇಕು" ಎಂದು ಸುಭಾಷ್ ಕುಲಕರ್ಣಿ ಸಲಹೆ ನೀಡಿದರು.
ಹಿರಿಯ ಪತ್ರಕರ್ತ ಋಷಿಕೇಶ್ ಬಹದ್ದೂರ ದೇಸಾಯಿ ಮಾತನಾಡಿ, "ಆಧುನಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಬೆಳಗಾವಿ ಅಧಿವೇಶನದ ಸಮಗ್ರ ಮಾಹಿತಿಯನ್ನು ಹೊಂದಿರುವ ಡಾಕ್ಯುಮೆಂಟರಿ ನಿರ್ಮಿಸಬೇಕು. ಇದಲ್ಲದೇ ಗಾಂಧೀಜಿಯವರ ತತ್ವಾದರ್ಶ ಮತ್ತು ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವಂತಹ ವಿಭಿನ್ನ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು. ಟಿಳಕವಾಡಿಯ ವೀರಸೌಧ ನಿತ್ಯ ಬಳಕೆಯಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು" ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇರುವ ಖಾದಿ ಉದ್ಯಮಕ್ಕೆ ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯಮಟ್ಟದಲ್ಲಿ ವ್ಯಾಪಾರಕ್ಕೆ ಅನಕೂಲವಾಗುವಂತೆ ಆನ್ ಲೈನ್ ಮಾರಾಟ ವೇದಿಕೆ ಕಲ್ಪಿಸಬಹುದು. ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಟಿಳಕವಾಡಿಯ ವೀರಸೌಧ ಬಳಿಯ ಮುಖ್ಯ ರಸ್ತೆಯಲ್ಲಿ ಕಮಾನು ಮಾದರಿಯ ಮಹಾದ್ವಾರ ನಿರ್ಮಿಸಬಹುದು ಎಂದು ಸಲಹೆ ಕೇಳಿ ಬಂತು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಲ್ಲೇಶ್ ಚೌಗಲೆ, ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಹಾಗೂ ಸೇವಾದಳದ ಬಸವರಾಜ್ ಹಟ್ಟಿಗೌಡರ ಸಲಹೆಗಳನ್ನು ನೀಡಿದರು.












Click it and Unblock the Notifications