ಕಾಂಗ್ರೆಸ್‌ದು 85 ಪರ್ಸೆಂಟ್ ಸರ್ಕಾರ, ರಾಜೀವ್ ಗಾಂಧಿನೇ ಬಹಿರಂಗಪಡಿಸಿದ್ರು; ಸಿಎಂ ಬೊಮ್ಮಾಯಿ
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಮತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಭಾರೀ ಕಸರತ್ತು ನಡೆಸಿದ್ದಾರೆ. ರೋಡ್ ಶೋ ಮತ್ತು ಸಮಾವೇಶಗಳ ಮೂಲಕ ಮತಪ್ರಚಾರ ಮಾಡುತ್ತಿದ್ದಾರೆ.
ರಾಜಕೀಯವಾಗಿ ತನ್ನದೇ ಛಾಪು ಮೂಡಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. 18 ಸ್ಥಾನಗಳ ಪೈಕಿ ಕನಿಷ್ಠ 15 ಸ್ಥಾನ ಗೆಲ್ಲಲು ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ರಣತಂತ್ರ ರೂಪಿಸಿದ್ದಾರೆ.

ಅಥಣಿ, ಸವದತ್ತಿ ಮತ್ತು ಕಡಚಿ ಕ್ಷೇತ್ರಗಳಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಬ್ಬರದ ಪ್ರಚಾರ ನಡೆಸಿದರೆ, ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಹಾಲಿ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ ಮತಬೇಟೆ ನಡೆಸಿದರು.
ಈ ವೇಳೆ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ರಾಯಭಾಗದಲ್ಲಿ ಈ ಬಾರಿ ದುರ್ಯೋಧನ ಐಹೊಳೆ 30 ಸಾವಿರ ಮತಗಳಿಂದ ಗೆಲ್ಲಲಿದ್ದಾರೆ. ಹೆಸರಿನಲ್ಲಿ ಮಾತ್ರ ಈತ ದುರ್ಯೋಧನ, ಮಾಡುವ ಕೆಲಸ ಎಲ್ಲವೂ ಭೀಮನ ಕೆಲಸ," ಎಂದು ಹೇಳಿದರು.
ರಾಯಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಐಎಎಸ್ ಅಧಿಕಾರಿ ಶಂಭೂ ಕಲ್ಲೋಳಕರ್ ಸ್ಪರ್ಧೆ ಮಾಡಿದ್ದು, "ಅಧಿಕಾರಿಗಳು ಹಣದ ಬಲದಿಂದ ಚುನಾವಣೆ ಗೆಲ್ಲಬಹುದು ಎಂದು ರಾಜಕಾರಣಕ್ಕೆ ಬರುತ್ತಾರೆ. ಇವರಿಗೆ ನಮಸ್ಕಾರ ಮಾಡಿಸಿಕೊಂಡು ರೂಢಿ ಇರುತ್ತದೆ. ಅಂತವರನ್ನು ಆಯ್ಕೆ ಮಾಡಿದರೆ ಜನರು ನಮಸ್ಕಾರ ಮಾಡಿಕೊಂಡೇ ಇರಬೇಕಾಗುತ್ತದೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಪರೋಕ್ಷವಾಗಿ ಲೇವಡಿ ಮಾಡಿದರು.

ರಾಜ್ಯವನ್ನು ಕೇವಲ ಶ್ರೀಮಂತದವರಿಂದ ಕಟ್ಟಲು ಸಾಧ್ಯವಿಲ್ಲ, ಬಡವರಿಂದ-ಕೂಲಿಕಾರ್ಮಿಕರಿಂದ ರಾಜ್ಯ ಕಟ್ಟಬಹುದು. ಹಿಂದಿನ ಸರ್ಕಾರದಲ್ಲಿ ಕೇವಲ ಭ್ರಷ್ಟಾಚಾರ ನಡೆಯುತ್ತಿತ್ತು. ಎಲ್ಲದರಲ್ಲೂ ಲೂಟಿ, ಕಮಿಷನ್ ತೆಗೆದುಕೊಳ್ಳುವ ಕೆಲಸವಾಗುತ್ತಿತ್ತು ಎಂದು ಹರಿಹಾಯ್ದರು.
ಹಿಂದೊಮ್ಮೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಕೇಂದ್ರದಿಂದ 100 ಪೈಸೆ ಬಿಡುಗಡೆಯಾದರೆ, ಫಲಾನುಭವಿಗಳಿಗೆ ತಲುಪುವುದು ಕೇವಲ 15 ಪೈಸೆ ಅಂತಾ ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಸರ್ಕಾರ 85 ಪರ್ಸೆಂಟ್ ಸರ್ಕಾರವೆಂದು ಆರೋಪಿಸಿದರು.
"ಕೋವಿಡ್-19 ಸಂದರ್ಭದಲ್ಲಿ ದೇಶದ ಜನರ ಸುರಕ್ಷತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೆಲಸ ಮಾಡಿವೆ. ಇಷ್ಟು ಜನ ಬಂದವರಲ್ಲಿ ಯಾರಾದರೂ ಮಸ್ಕ್ ಹಾಕಿಕೊಂಡು ಬಂದಿದ್ದೀರಾ?, ಅಮೆರಿಕಾ, ಇಂಗ್ಲೆಂಡ್‌ನಲ್ಲಿ ಈಗಲೂ ಮಾಸ್ಕ್ ಹಾಕಿಕೊಳ್ಳುತ್ತಾರೆ," ಎಂದಯ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

"ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ 130 ಕೋಟಿ ಜನರಿಗೆ ಉಚಿತವಾಗಿ ವ್ಯಾಕ್ಸಿನೇಷನ್ ಮಾಡಿಸಲಾಗಿದೆ. ರೈತರಿಗಾಗಿ ರೈತ ವಿಧ್ಯಾನಿಧಿ ಯೋಜನೆ, ಪ್ರತಿಯೊಬ್ಬ ರೈತನಿಗೆ ವಿಮೆ ಮಾಡಿಸಲಾಗಿದೆ. ಅಕಾಲಿಕವಾಗಿ ರೈತ ತೀರಿ ಹೋದರೂ ಸಹ ಅವನ ಕುಟುಂಬಕ್ಕೆ 2 ಲಕ್ಷ ಸಿಗುವಂತೆ ಮಾಡಿದ್ದೇವೆ," ಎಂದು ಹೇಳಿದರು.
"ಕಳೆದ 30 ವರ್ಷಗಳಿಂದ ಮೀಸಲಾತಿ ಹೆಚ್ಚಿಸಲು ಎಸ್‌ಸಿ ಮತ್ತು ಎಸ್‌ಟಿ ವರ್ಗದವರು ಹೋರಾಟ ಮಾಡುತ್ತಿದ್ದರು. ಹಿಂದಿನ ಸರ್ಕಾರಗಳು ಮೀಸಲಾತಿ ಹೆಚ್ಚಿಸದೇ, ಅನ್ಯಾಯ ಮಾಡಿದ್ದರು. ಆದರೆ, ನಾನು ಮೀಸಲಾತಿ ಜೇನುಗೂಡಿಗೆ ಕೈ ಹಾಕಿ ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿದ್ದೇನೆ," ಎಂದರು.
"ನಾನು ಗಂಡು ಮೆಟ್ಟಿದ ನಾಡಿನಿಂದ ಬಂದಿದ್ದೇನೆ, ನಾನು ಒಂದು ಕೈ ನೋಡಿಯೇ ಬಿಡುತ್ತೇನೆ ಅಂತ ಹೇಳಿದ್ದೆ. ಎಲ್ಲ ವರ್ಗದವರನ್ನು ಸಮಾನವಾಗಿ ನೋಡುವ ಕೆಲಸ ಮಾಡಿದ್ದೇನೆ. ಇದರಿಂದ ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಒಂದಿಬ್ಬರು ಪಕ್ಷದಿಂದ ಹೊರಹೋದರೆ ಯಾವುದೇ ನಷ್ಟವಿಲ್ಲ. ಇಡೀ ಲಿಂಗಾಯತ ಸಮುದಾಯ ನಮ್ಮೊಂದಿಗಿದೆ," ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications