Khanapur Constituency: 'ಕೈ' ನಾಯಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸ್ಪರ್ಧೆಗೆ ಬಿಜೆಪಿಯಿಂದ ಹಲವು ಆಕಾಂಕ್ಷಿಗಳು- ವಿಶ್ಲೇಷಣೆ
ಮರಾಠಿ ಭಾಷಿಗರೇ ಅಧಿಕವಾಗಿರುವ ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ವರದಿ, ವಿಶ್ಲೇಷಣೆ ಓದಿ
ಬೆಳಗಾವಿ, ಮಾರ್ಚ್ 15: ಕರ್ನಾಟಕದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರವೂ ಒಂದು. ಇದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಒಳಗೊಂಡಿರುವ 8 ಕ್ಷೇತ್ರಗಳಲ್ಲಿ ಒಂದಾಗಿದೆ. ಖಾನಾಪುರ ಕ್ಷೇತ್ರದಲ್ಲಿ ಮರಾಠ ಭಾಷಿಗರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದಾಗಿ, ಇಲ್ಲಿ ಮೊದಲಿನಿಂದಲೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ಹಾಗೂ ಪಕ್ಷೇತರರು ಆಯ್ಕೆಯಾಗುತ್ತಾ ಬಂದಿದ್ದಾರೆ.
1957 ರಿಂದ 2004 ರ ವರೆಗೆ ಈ ಕ್ಷೇತ್ರದಲ್ಲಿ ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008 ರಲ್ಲಿ ಬಿಜೆಪಿಯ ಪ್ರಹ್ಲಾದ ರೇಮಾನಿ ಆಯ್ಕೆಯಾದರು. 2013ರಲ್ಲಿ ಎಂಇಎಸ್ ಬೆಂಬಲಿತ ಅರವಿಂದ ಚಂದ್ರಕಾಂತ ಪಾಟೀಲ ಜಯಗಳಿಸಿದರು. 2018 ರಲ್ಲಿ ಈ ಕ್ಷೇತ್ರವು ಮೊದಲ ಬಾರಿಗೆ ಕಾಂಗ್ರೆಸ್ ಪಾಲಾಯಿತು. ಪ್ರಸ್ತುತ ಅಂಜಲಿ ನಿಂಬಾಳ್ಕರ್ ಈ ಕ್ಷೇತ್ರದಲ್ಲಿ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂಜಲಿ ನಿಂಬಾಳ್ಕರ್ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ವಿಠಲ ಹಲಗೇಕರ್ ಅವರನ್ನು ಐದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು. ಅಂಜಲಿ ನಿಂಬಾಳ್ಕರ್ ಅವರು ಕರ್ನಾಟಕ ಕಾಂಗ್ರೆಸ್ ಘಟಕದ ಹಿರಿಯ ನಾಯಕಿ ಮತ್ತು ವಕ್ತಾರರೂ ಆಗಿದ್ದಾರೆ. ಅವರು ಸ್ತ್ರೀರೋಗ ಶಾಸ್ತ್ರ ಮತ್ತು ಲ್ಯಾಪರೊಸ್ಕೋಪಿಯಲ್ಲಿ ಸ್ನಾತಕೋತ್ತರ ( ಎಂಬಿಬಿಎಸ್ ) ಪದವಿಯನ್ನು ಪಡೆದಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಹತ್ತು ವೈದ್ಯರಲ್ಲಿ ಅವರು ಒಬ್ಬರು.
2023 ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರದಿಂದ ಅವರೊಬ್ಬರೇ ಅರ್ಜಿ ಸಲ್ಲಿಸಿದ್ದಾರೆ. ಭಾಷಾ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ಖಾನಾಪುರ ಕ್ಷೇತ್ರದಲ್ಲಿ ಮರಾಠಾ ಭಾಷಿಗರದ್ದೇ ಪ್ರಾಬಲ್ಯವಿದೆ. ಮರಾಠ ಸಮುದಾಯಕ್ಕೆ ಸೇರಿರುವ ಅಂಜಲಿ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.

ಇಲ್ಲಿನ ಮರಾಠಿಗರು ಹಿಂದುತ್ವಕ್ಕೆ ಹೆಚ್ಚು ಅಂಟಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬಿಜೆಪಿಗೆ ಈ ಕ್ಷೇತ್ರದಲ್ಲಿ ಸ್ಪಲ್ಪ ಮಟ್ಟಿಗಿನ ಅನುಕೂಲಕರ ವಾತಾವರಣವಿದೆ. ಹೀಗಾಗಿ ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಕಳೆದ ಬಾರಿ ಅಂಜಲಿ ನಿಂಬಾಳ್ಕರ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿರುವ ವಿಠಲ ಹಲಗೇಕರ ಅವರು ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.
ಡಾ ಸೋನಾಲಿ ಸರ್ನೋಬಾತ್, ಧನಶ್ರೀ ಸರ್‌ದೇಸಾಯಿ, ಪ್ರಮೋದ ಕೋಚೇರಿ ಹಾಗೂ ಅರವಿಂದ ಪಾಟೀಲ ಅವರೂ ಸಹ ಬಿಜೆಪಿ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿರುವುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ವಶದಲ್ಲಿರುವ ಈ ಕ್ಷೇತ್ರವನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಜೆಡಿಎಸ್ ಈ ಕ್ಷೇತ್ರದಲ್ಲಿ ಅಷ್ಟೇನು ಬಲಿಷ್ಠವಾಗಿಲ್ಲ.

ಖಾನಾಪುರ ಕ್ಷೇತ್ರದಲ್ಲಿ ಡಾ ಅಂಜಲಿ ನಿಂಬಾಳ್ಕರ್ ಅವರು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಿಳೆಯರಿಗೆ ಅಂತಲೇ ಹಲವು ಕಾರ್ಯಕ್ರಮಗಳನ್ನು ಅಂಜಲಿ ನಿಂಬಾಳ್ಕರ್ ಹಮ್ಮಿಕೊಂಡಿರುವುದು ಅವರಿಗೆ ಪ್ಲಸ್ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ಒಂದು ವೇಳೆ, ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್‌ನಿಂದ ನಿಲ್ಲುವುದೇ ಖಚಿತವಾದರೆ, ಬಿಜೆಪಿಯು ಮಹಿಳಾ ಮಣಿಗಳಿಗೆ ಮಣೆಹಾಕಬಹುದು ಎಂಬ ಮಾತುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ತರ್ಕಿಸುವುದಾದರೆ, ಡಾ ಸೋನಾಲಿ ಸರ್ನೋಬಾತ್ ಅಥವಾ ಧನಶ್ರೀ ಸರ್‌ದೇಸಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೂ ಅಚ್ಚರಿ ಪಡಬೇಕಿಲ್ಲ.












Click it and Unblock the Notifications