ಕರ್ನಾಟಕ: 2022ರಲ್ಲಿ ದಾಖಲಾದ ಸೈಬರ್ ಕ್ರೈಂ ಪ್ರಕರಣ ಸಂಖ್ಯೆಯ ವಿವರ ಇಲ್ಲಿದೆ
ಬೆಳಗಾವಿ, ಡಿಸೆಂಬರ್, 27: ರಾಜ್ಯದಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ 2022ರಲ್ಲಿ 185 ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿಯಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಐಪಿಸಿ ಸೆಕ್ಷನ್, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಮಧ್ಯವರ್ತಿ ನಿಯಮಗಳು 2011 ಮತ್ತು 2022ರ ಅಡಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ, ಅಸಭ್ಯ ಮತ್ತು ಸಾಮಾಜಿಕ ವಿರೋಧಿ ವಿಡಿಯೋಗಳು, ಪೋಸ್ಟ್‌ಗಳನ್ನು ಹಂಚಿಕೊಳ್ಳುವವರ ವಿರುದ್ಧ 185 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ಪ್ರತಿ ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸೈಬರ್ ಕ್ರೈಂ ಪೊಲೀಸ್ ಘಟಕಗಳನ್ನು ಸ್ಥಾಪಿಸಿದೆ. ಸೈಬರ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ಗುಜರಾತ್‌ನ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಎಂಎಲ್‌ಸಿ ಪಿ.ಆರ್. ರಮೇಶ್ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಅಸಭ್ಯವಾಗಿರುವ ವಿಡಿಯೋಗಳು, ರೀಲ್ಸ್‌ಗಳು ಮತ್ತು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಲಾಗುತ್ತಿದೆ. ಶಿಕ್ಷಣದ ಉದ್ದೇಶಕ್ಕಾಗಿ ಫೋನ್ ಬಳಸಬೇಕಾದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಲೈಂಗಿಕ ವಿಷಯಗಳ ಕಡೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಐಟಿ ಕಾಯ್ದೆಯಡಿ ಬಂಧಿತರಾದ ಆರೋಪಿಗಳಲ್ಲಿ ಶೇಕಡಾ 1 ರಷ್ಟು ಆರೋಪಿಗಳಿಗೆ ಇದುವರೆಗೆ ಶಿಕ್ಷೆಯಾಗಿಲ್ಲ ಎಂದು ತಿಳಿಸಿದರು.

ಎನ್‌ಸಿಆರ್ ದಾಖಲಿಸಿದ ದೂರುಗಳ ವಿವರ
ಒಟ್ಟಾರೆಯಾಗಿ 2018ರಲ್ಲಿ 21, 2019ರಲ್ಲಿ 51, 2020ರಲ್ಲಿ 130, 2021ರಲ್ಲಿ 175 ಮತ್ತು 2022ರಲ್ಲಿ 185 ಪ್ರಕರಣಗಳನ್ನು ದಾಖಲಿಸಲಾಗಿದೆ. ಸೈಬರ್ ಕಳ್ಳತನ ಮತ್ತು ಇತರ ಸೈಬರ್ ಅಪರಾಧಗಳಿಗೆ ಸಂಬಂಧಿದಂತೆ ಒಟ್ಟು 80,379 ದೂರುಗಳು ರಾಷ್ಟ್ರೀಯ ಸೈಬರ್ ಕ್ರೈಮ್ (ಎನ್‌ಸಿಆರ್) ವರದಿ ಮಾಡಿದೆ ಎಂದು ಮಾಹಿತಿ ನೀಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನುಮೋದನೆ ನೀಡುವುದರೊಂದಿಗೆ, ಕರ್ನಾಟಕದಲ್ಲಿ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯ ಬರಲಿದೆ. ಸಮಾಜಕ್ಕೆ ಮಾರಕವಾಗುವಂತಹ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಹೆಚ್ಚಿನ ಸೈಬರ್ ತಜ್ಞರು ಸಿದ್ಧರಾಗಲಿದ್ದಾರೆ ಎಂದು ತಿಳಿಸಿದರು.

ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ಸಚಿವರು ಹೇಳದ್ದೇನು?
ಸೈಬರ್ ವಂಚಕರಿಂದ ನಡೆದಿರುವ ಕೃತ್ಯಗಳ ಕುರಿತು ದಾಖಲಾದ ದೂರುಗಳಿಗೆ ಸಂಬಂಧಿಸಿದಂತೆ 528 ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲಾಗಿದೆ. 2,738 ಪ್ರಕರಣಗಳಲ್ಲಿ ಸಂಜ್ಞೇಯವಲ್ಲದ ಅಪರಾಧ ಪ್ರಕರಣ ದಾಖಲಿಸಲಾಗಿದೆ. 901 ದೂರುಗಳನ್ನು ತಿರಸ್ಕರಿಸಲಾಗಿದೆ. 53,229 ದೂರುಗಳು ಪರಿಶೀಲನೆ ಹಂತದಲ್ಲಿವೆ. 14,960 ದೂರುಗಳನ್ನು ಮುಕ್ತಾಯಗೊಳಿಸಲಾಗಿದೆ. 5,734 ದೂರುಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವ ಬಾಕಿ ಇದೆ. ಇದರಲ್ಲಿ 2,028 ಜನ ದೂರುಗಳನ್ನು ಹಿಂಪಡೆದಿದ್ದಾರೆ.

ಆತಂಕ ವ್ಯಕ್ತಪಡಿಸಿದ ರಮೇಶ್
ವೆಬ್ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮಾಹಿತಿ, ಚಿತ್ರ, ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಿ ಮಕ್ಕಳು, ಯುವಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಈ ಸಂಬಂಧ ದಾಖಲಾಗುವ ದೂರುಗಳ ಪೈಕಿ ಶೇಕಡಾ 0.75ರಷ್ಟು ಪ್ರಕರಣಗಳಲ್ಲೂ ಸರ್ಕಾರ ಕ್ರಮ
ಜರುಗಿಸಿಲ್ಲ. ಈ ವಿಚಾರದಲ್ಲಿ ಕಠಿಣ ಕ್ರಮ ಜರುಗಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಮೇಶ್ ಆತಂಕ ವ್ಯಕ್ತಪಡಿಸಿದರು.

ಪೊಲೀಸರಿಗೆ ತರಬೇತಿ ಕೊಡಿಸಲಾಗುತ್ತಿದೆ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ ಸೈಬರ್ ವಂಚನೆ, ಅಕ್ರಮ ತಡೆಗೆ ಸರ್ಕಾರ ಬದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸೈಬರ್ ಅಪರಾಧ ನಿಯಂತ್ರಣ ಪೊಲೀಸ್ ಠಾಣೆಗಳಿಗೆ ತಜ್ಞ ಸಿಬ್ಬಂದಿ ನೇಮಿಸಲಾಗಿದೆ. ಅಹಮದಾಬಾದ್‌ನ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮೂಲಕ ಪೊಲೀಸರಿಗೆ ತರಬೇತಿ
ಕೊಡಿಸಲಾಗುತ್ತಿದೆ. ನಮ್ಮ ಪೊಲೀಸರು ಒಂದು ವರ್ಷದಲ್ಲಿ 70 ಕೋಟಿ ರೂಪಾಯಿ ಮೌಲ್ಯದ ಅಕ್ರಮವನ್ನು ತಡೆದಿದ್ದಾರೆ ಎಂದರು.












Click it and Unblock the Notifications