Belagavi: ಕನ್ನಡ ರಾಜ್ಯೋತ್ಸವದಂದೇ MES ಕರಾಳ ದಿನಾಚರಣೆಗೆ ಸಜ್ಜು, ಡಿಸಿ ಕೊಟ್ಟ ಎಚ್ಚರಿಕೆಯೇನು?
ಬೆಳಗಾವಿ, ಅಕ್ಟೋಬರ್ 29: ಕರ್ನಾಟಕದ ಬೆಳಗಾವಿ ಗಡಿ ಭಾಗದಲ್ಲಿ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪುಂಡಾಟ ಮತ್ತೆ ಮುಂದುವರಿದಿದೆ. ಆಗಾಗ ಖ್ಯಾತೆ ತೆಗೆಯುವ ಎಂಇಎಸ್ ನವೆಂಬರ್ 1ರಂದು ಕರಾಳ ದಿನಾಚರಣೆ ಆಚರಿಸಲು ಸಜ್ಜಾಗಿದೆ. ಇದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೆಲ್ಲ ನೋಡಿದರೆ ಗಡಿ ವಿವಾದ ಮತ್ತೆ ಭುಗಿಲೇಳುವ ಲಕ್ಷಣಗಳು ಕಂಡು ಬರುತ್ತಿವೆ.
ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಯಲ್ಲಿ ನವೆಂಬರ್ 1ರಂದು ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ತಯಾರಿ ನಡೆದಿದೆ. ಇತ್ತ ಕರಾಳ ದಿನಾಚರಣೆ ಎಂಬಿಎಸ್ ಸಜ್ಜಾಗುವ ಮೂಲಕ ಮತ್ತೆ ಖ್ಯಾತೆ ಆರಂಭಿಸಲು ಯತ್ನಿಸುತ್ತಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತನ್ನ ಸರ್ಕಾರದ ಪ್ರತಿನಿಧಿಗಳನ್ನು ಕರಾಳ ದಿನಾಚರಣೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದು ವರದಿ ಆಗಿದೆ.

ಇದೆಲ್ಲ ಬೆಳವಣಿಗೆ ಗಮನಿಸಿರುವ ಬೆಳಗಾವಿ ಜಿಲ್ಲಾಧಿಕಾರಿ ಸತೀಶ್ ಪಾಟೀಲ್ ಅವರು ಕರಾಳ ದಿನಾಚರಣೆ ಮಾಡದಂತೆ ಎಂಇಎಸ್‌ಗೆ ಎಚ್ಚರಿಕೆ ನೀಡಿದ್ದಲ್ಲದೇ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಒಂದು ವೇಳೆ ಆದೇಶ ಉಲ್ಲಂಘಿಸಿ ಕರಾಳ ದಿನಾಚರಣೆ ಆಚರಿಸಿದ್ದೇ ಆದಲ್ಲಿ ಅಂತವರ ವಿರುದ್ಧ ಕಠಿಣ ಕ್ರಮ ವಹಿಸುವಂತೆ ನಿರ್ದೇಶಿಸಲಾಗಿದೆ. ಜೊತೆಗೆ ಮಹಾರಾಷ್ಟ್ರ ರಾಜ್ಯ ನಾಯಕರು ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಎಂಇಎಸ್ ಪುಂಡರಿಂದ ಪದೇ ಪದೆ ಖ್ಯಾತೆ
ಎಂಇಎಸ್ ಪುಂಡರು ಬೆಳಗಾವಿ ಗಡಿ ವಿವಾದವನ್ನು ಸದಾ ಜೀವಂತ ಇಡಲು ಪ್ರಯತ್ನಿಸಿದಂತೆ ಅವರ ವರ್ತನೆ. ಇತ್ತೀಚೆಗೆ ಧ್ವಜ ಸ್ತಂಭ ಕಿತ್ತು ಪುಂಡಾಟಿಕೆ ಮೆರೆದಿದ್ದರು. ಪ್ರತಿ ಬಾರಿ ರಾಜ್ಯೋತ್ಸವ ವೇಳೆಯು ಕರಾಳ ದಿನಾಚರಣೆಗೆ ಮುಂದಾದಂತೆ ಈ ಬಾರಿಯು ನಿರ್ಧರಿಸಿದ್ದಾರೆ. ಇಂತವರಿಗೆ ಮಹಾ ಸಿಎಂ ಸಿಂಧೆ ಬೆಂಬಲ ವ್ಯಕ್ತಪಡಿಸಿದ್ದೇ ತಡ ನಮ್ಮನ್ನು ತಡೆಯೋರೆ ಇಲ್ಲ ಎಂಬಂತ ಸ್ಥಿತಿ ಎಂಇಎಸ್ ಸದಸ್ಯರು ತಲುಪಿದ್ದಾರೆ. ಇದರಿಂದ ಗಡಿ ಭಾಗದ ನಾಗರಿಕರಿಗೆ ಶಾಂತಿ, ನೆಮ್ಮದಿ ಇಲ್ಲದಾಗಿದೆ.
ಸದರಿ ಕರಾಳ ದಿನಾಚರಣೆ ಸಂಬಂಧ ಬೆಳಗಾವಿ ಒಳಗೆ ಸಂಸದ ಧೈರ್ಯಶೀಲ ಮಾನೆ, ಮಹಾರಾಷ್ಟ್ರದ ಗಡಿ ಉಸ್ತುವಾರಿ ಸೇರಿದಂತೆ ಸಚಿವರನ್ನು ಕರೆತರಲು ಎಂಇಎಸ್ ಯೋಜಿಸಿದೆ. ಈ ಮೂಲಕ ಕರ್ನಾಟಕ ವಿರುದ್ಧದ ನೀತಿ ಅನುಸರಿಸಲಿದ್ದಾರೆ.
ಇನ್ನೂ ಗಡಿ ಭಾಗದಲ್ಲಿ ಮಹಾರಾಷ್ಟ್ರ ಸರ್ಕಾರವು ಕಚೇರಿ ಆರಂಭಕ್ಕೆ ಕೈಹಾಕಿದೆ. ಈ ನಿರ್ಧಾರವು ಮರಾಠಿಗರನ್ನು ಪ್ರಚೋದಿಸಿದಂತಾಗುತ್ತದೆ. ಗಡಿಯಲ್ಲಿ ಇಂತಹ ಬೆಳವಣಿಗೆಗಳಿಗೆ ಕರ್ನಾಟಕ ಸರ್ಕಾರ ಬ್ರೇಕ್ ಹಾಕಿ ಶಾಂತಿ ನೆಲೆಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.












Click it and Unblock the Notifications