ಬೆಳಗಾವಿಯಲ್ಲಿ ನಡೆಯಿತಾ ಮರ್ಯಾದಾ ಹತ್ಯೆ?
ಬೆಳಗಾವಿ, ಅ, 23 : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ಪ್ರೇಮಿಗಳಿಬ್ಬರನ್ನು ಮರಕ್ಕೆ ಕಟ್ಟಿದಹಾಕಿ ಮಚ್ಚಿನಿಂ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳವಾರ ರಾತ್ರಿ ಚಿಕ್ಕೋಡಿ ತಾಲೂಕಿನ ಮಮದಾಪುರ ಗ್ರಾಮದ ನಿವಾಸಿಗಳಾದ ಬಸವರಾಜ್ ಬುವಜಿ (24) ಮತ್ತು ಸಂಗೀತಾ ಹಳ್ಳೂರ (20) ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಇದರಿಂದ ಕೋಪಗೊಂಡ ಸಂಗೀತಾ ಪೋಷಕರು ಈ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗೀತಾ ಮತ್ತು ಬಸವರಾಜ್ ಪರಸ್ಪರ ಪ್ರೀತಿಸುತ್ತಿದ್ದರು ಇದನ್ನು ತಿಳಿದ ಆಕೆಯ ಕುಟುಂಬದವರು, ಬೇರೊಬ್ಬರೊಂದಿಗೆ ಕೆಲವು ದಿನಗಳ ಹಿಂದೆ ಆಕೆಯ ಮದುವೆ ಮಾಡಿದ್ದರು. ಎರಡು ದಿನಗಳ ಹಿಂದೆ ಪತಿಯ ಮನೆಯಿಂದ ಸಂಗೀತಾ ತವರಿಗೆ ಆಗಮಿಸಿದ್ದಳು.
ಮಂಗಳವಾರ ರಾತ್ರಿ ಸಂಗೀತಾ ಮತ್ತು ಬಸವರಾಜ್ ಮಮದಾಪುರ ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯ ಬಳಿ ಪರಸ್ಪರ ಭೇಟಿಯಾಗಿದ್ದಾರೆ. ಈ ವಿಷಯ ಸಂಗೀತಾ ಪೋಷಕರಿಗೆ ತಿಳಿದಿದೆ. ಸ್ಥಳಕ್ಕೆ ಧಾವಿಸಿದ ಅವರು, ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ತಮ್ಮ ಮಗಳ ವರ್ತನೆಯಿಂದ ಕೋಪಗೊಂಡ ಸಂಗೀತಾ ಪೋಷಕರು ಸಂಬಂಧಿಕರೊಂದಿಗೆ ಸೇರಿ, ಈ ಕೊಲೆ ಮಾಡಿದ್ದಾರೆ ಇದು ಮರ್ಯಾದಾ ಹತ್ಯೆ ಪ್ರಕರಣ ಎಂದು ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕೋಡಿ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರೇಯಸಿ ನೋಡಲು ಬಂದು ಹೆಣವಾದ : ಸಂಗೀತಾ ಮತ್ತು ಬಸವರಾಜ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಂಗೀತಾ ಬೇರೊಬ್ಬರೊಂದಿಗೆ ವಿವಾಹವಾದರೂ ಬಸವರಾಜ್ ಆಕೆಯ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸುತ್ತಿದ್ದ. ತವರಿಗೆ ಆಗಮಿಸಿದಾಗ ತನ್ನನ್ನು ಭೇಟಿ ಮಾಡುವಂತೆ ಸಂಗೀತಾಳಿಗೆ ಮನವಿ ಮಾಡಿದ್ದ.
ಅದರಂತೆ ತವರಿಗೆ ಆಗಮಿಸಿದ್ದ ಸಂಗೀತಾ ಬಸವರಾಜ್ ಗೆ ಕರೆ ಮಾಡಿ ತೋಟದ ಮನೆ ಸಮೀಪ ಭೇಟಿಯಾಗೋಣ ಎಂದು ಹೇಳಿದ್ದಳು. ಅದರಂತೆ ಮಂಗಳವಾರ ರಾತ್ರಿ ತೋಟದ ಮನೆಯ ಬಳಿ ಪ್ರೇಯಸಿ ನೋಡಲು ಬಂದಿದ್ದಿ ಬಸವರಾಜ್ ಕೊಲೆಯಾಗಿ ಹೋಗಿದ್ದಾನೆ.












Click it and Unblock the Notifications