ಬೆಳಗಾವಿ ಗಲಾಟೆ: ಪೊಲೀಸರ ಕ್ರಮಗಳನ್ನು ಕಾದು ನೋಡಿ; ಆರಗ ಜ್ಞಾನೇಂದ್ರ
ಬೆಳಗಾವಿ, ಡಿಸೆಂಬರ್ 18: ಬೆಳಗಾವಿ ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಶುಕ್ರವಾರ ತಡರಾತ್ರಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಕಿಡಿಗೇಡಿಗಳು ಹಾನಿಗೊಳಿಸಿ ಬೀಳಿಸಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ದುಷ್ಕರ್ಮಿಗಳು ಆಗಮಿಸಿ ಪುತ್ಥಳಿ ಬೀಳಿಸಿ ದುಷ್ಕೃತ್ಯ ಮೆರೆದಿದ್ದಾರೆ. ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿ ಮೆರೆದಿದ್ದು, ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನು ಗಲಾಟೆಯಲ್ಲಿ ಕರ್ನಾಟಕ ಸರ್ಕಾರದ ವಾಹನಗಳನ್ನೇ ಟಾರ್ಗೆಟ್ ಮಾಡಿ ಕಲ್ಲು ತೂರಾಟ ನಡೆದಿದ್ದು, ಬೆಳಗಾವಿ ಅಧಿವೇಶನ ಸಂದರ್ಭದಲ್ಲಿಯೇ ರಾಜ್ಯದ್ರೋಹಿಗಳು ಗಲಾಟೆ ಮಾಡುತ್ತಿರುವ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಬೆಳಗಾವಿ ನಗರದ ಮೂರು ಕಾಲೋನಿಯಲ್ಲಿ 20ಕ್ಕೂ ಅಧಿಕ ಕಾರುಗಳ ಗ್ಲಾಸು ಪುಡಿ ಪುಡಿಯಾಗಿದ್ದು, ಘಟನೆಯಿಂದ ಜನ ಕಂಗಾಲಾಗಿದ್ದಾರೆ. ಮಲಗಿದವರು ಹೊರ ಬಂದು ನೋಡುವಷ್ಟರಲ್ಲಿ ಕಾರುಗಳ ಚಿತ್ರಣವೇ ಬದಲಾಗಿದ್ದವು.
ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ
"ಬೆಳಗಾವಿಯಲ್ಲಿ ಕೆಲವು ಕಿಡಿಗೇಡಿಗಳು ಮಾಡಿರುವ ಗಲಾಟೆ ವಿಚಾರ ನನ್ನ ಗಮನಕ್ಕೆ ಬಂದಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
"ಬೆಳಗಾವಿ ನಗರದಲ್ಲಿ ಪ್ರಾತಸ್ಮರಣೀಯ ವೀರನಾದ, ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರುಗಳು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ. ಪ್ರತಿಯೊಬ್ಬ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತ ಭಾರತೀಯ ಪುತ್ರರು," ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

"ಇಬ್ಬರು ವೀರರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸಿ, ಭಾಷಾ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವ ಘಟನೆ ಅಕ್ಷಮ್ಯ ಅಪರಾಧವಾಗಿದೆ. ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ ಹಾಗೂ ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸೇಕೆಂದು," ವಿನಂತಿಸಿದ್ದಾರೆ.
"ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೆ ನಮ್ಮ ಸರ್ಕಾರ ಬಿಡಲ್ಲ. ಇದು ಬೆರಳೆಣಿಕೆಯಷ್ಟು ಜನರು ಮಾಡುತ್ತಿರುವ ಕೃತ್ಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪುಂಡಾಟಗಳನ್ನು ಹತ್ತಿಕ್ಕುತ್ತೇವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇವೆ. ತಪ್ಪಿತಸ್ಥರಿಗೆ ಈ ಬಾರಿ ಭಯ ಹುಟ್ಟಿಸುತ್ತೇವೆ. ಪೊಲೀಸರು ತೆಗೆದುಕೊಳ್ಳುವ ಕ್ರಮಗಳನ್ನು ಕಾದು ನೋಡಿ," ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇನ್ನು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿಯೂ ಶಿವಸೇನೆ ಕಾರ್ಯಕರ್ತರು ಗಲಾಟೆ ಮಾಡಿದ್ದು, ಶುಕ್ರವಾರ ರಾತ್ರಿ ಕನ್ನಡಿಗರಿಗೆ ಸೇರಿದ ಹೋಟೆಲ್, ಅಂಗಡಿಳನ್ನು ಬಂದ್ ಮಾಡಿಸಿದ್ದಾರೆ. ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿ ಅಂಗಡಿಗಳನ್ನು ಓಪನ್ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಳಗಾವಿಯಲ್ಲಿ ತಡರಾತ್ರಿ ಶಿವಸೇನೆ ಮತ್ತು ಎಂಇಎಸ್ ಪುಂಡರಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಪರಿಸ್ಥಿತಿ ಕೈಮೀರುವ ಹಿನ್ನೆಲೆ ಕರ್ನಾಟಕ ಪೊಲೀಸರು ಅಲರ್ಟ್ ಆಗಿದ್ದಾರೆ. ಸ್ಥಳದಲ್ಲಿ 400ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಪೊಲೀಸರು ಕೂಡಲೇ ಧರಣಿ ನಿರತರನ್ನು ವಾಪಸ್ ಕಳಿಸಿದ್ದರು. ಆದರೆ ವಾಪಸ್ ಹೋದವರಂತೆ ಹೋಗಿ ಕೆಲವರು ಮತ್ತೆ ಪುಂಡಾಟ ಮೆರೆದಿದ್ದಾರೆ.
ಬೆಳಗಾವಿಯ ರಾಮಲಿಂಗಖಿಂಡ ಗಲ್ಲಿ ಬಳಿ ಕಲ್ಲು ತೂರಾಟದಲ್ಲಿ 20ಕ್ಕೂ ಹೆಚ್ಚು ಕಾರುಗಳು ಜಖಂಗೊಂಡಿವೆ. 6 ಸರ್ಕಾರಿ ಕಾರುಗಳು ಹಾಗೂ 6 ಪೊಲೀಸ್ ಇಲಾಖೆ ಜೀಪ್‌ಗಳು, ಸಿನಿಮಾ ನೋಡಲು ಬಂದಿದ್ದವರ ಎರಡು ಕಾರುಗಳಿಗೆ ಹಾನಿಯಾಗಿವೆ. ಮನೆಗಳ ಮುಂದೆ ನಿಲ್ಲಿಸಿದ್ದ ಕಾರುಗಳ ಮೇಲೂ ಕಲ್ಲು ತೂರಾಟವಾಗಿದೆ.
ಪುಂಡರು ಕಲ್ಲು ತುರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಕೈಯಲ್ಲಿ ಕಲ್ಲು ಹಿಡಿದು ಏಕಾಏಕಿ ಲಾಡ್ಜ್ ಬಳಿ ಬಂದ ಎಂಇಎಸ್ ಗ್ಯಾಂಗ್ ಸೆಕ್ಯೂರಿಟಿ ಗಾರ್ಡ್ ಇದ್ದರೂ ಕೇರ್ ಮಾಡದೆ ಕಲ್ಲು ತೂರಿ ಪರಾರಿಯಾಗಿದ್ದಾರೆ. ಹಾನಿಯಾದ ಕಾರುಗಳನ್ನು ಪೊಲೀಸ್ ಸಿಬ್ಬಂದಿ ಆರ್‌ಟಿಓ ವೃತ್ತದ ಬಳಿ ಪೊಲೀಸ್ ಕ್ವಾಟರ್ಸ್‌ಗೆ ತಂದು ನಿಲ್ಲಿಸಿದ್ದಾರೆ.












Click it and Unblock the Notifications