"ರಮೇಶ್ ಸೋಲಿಸುವುದಕ್ಕಿಂತ ಅಶೋಕ ಪೂಜಾರಿ ಗೆಲ್ಲಿಸುವುದೇ ನನ್ನ ಹೋರಾಟ"
ಬೆಳಗಾವಿ, ನವೆಂಬರ್ 18: "ನನಗೆ ಉಪ ಚುನಾವಣೆ ಸವಾಲಾಗಿದೆ. ನಾನು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಗೆ ಹೆಚ್ಚಿಗೆ ಅನುದಾನ ಕೊಟ್ಟಿದ್ದೇನೆ. ಜಿಲ್ಲೆಗೆ ನನ್ನದೇ ಆದ ಕೊಡುಗೆ ನೀಡಿದ್ದೇನೆ. ಆದ್ದರಿಂದ ಇಲ್ಲಿ ಗೆಲ್ಲುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ ಎಚ್.ಡಿ.ಕುಮಾರಸ್ವಾಮಿ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, "ನಾನು ಆತುರ ಪಡದೆ ಇಲ್ಲಿ ಮೂರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇನೆ. ಅಶೋಕ ಪೂಜಾರಿ ಅವರು ಸ್ವಂತ ಮನೆಗೆ ಬಂದಿದ್ದಾರೆ. ಅವರು ಪಕ್ಷಾಂತರ ಮಾಡಿಲ್ಲ. ಇವತ್ತು ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ನಾನು ಒಂದು ವಾರ ಬೆಳಗಾವಿಯಲ್ಲಿ ಇದ್ದು ಪ್ರಚಾರ ಮಾಡುವೆ" ಎಂದು ತಿಳಿಸಿದ್ದಾರೆ.
"ಈ ಕ್ಷೇತ್ರ ನನಗೆ ಪ್ರತಿಷ್ಠೆಯ ವಿಚಾರವಾಗಿದೆ. ನಾನು ಗೋಕಾಕ್ ನಲ್ಲಿ ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವೆ. ಗೋಕಾಕ್ ನಲ್ಲಿ ಜನತೆಯ ಆಶೀರ್ವಾದದಿಂದ ಅಭ್ಯರ್ಥಿ ಜಯ ಪಡೆಯಲಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿಚಾರವಾಗಿಯೂ ಮಾತನಾಡಿದ ಅವರು, "ಮೈತ್ರಿ ಸರ್ಕಾರ ಪತನಕ್ಕೆ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕಾರಣವಾಗಿದ್ದಾರೆ. ರೈತರ ದುಡ್ಡಲ್ಲಿ ಸಾಹುಕಾರ ಸಾಹುಗಾರಿಕೆ ಮಾಡಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ರಮೇಶ್ ಅವರನ್ನು ಸೋಲಿಸುವುದಕ್ಕಿಂತ ಅಶೋಕ ಪೂಜಾರಿ ಗೆಲ್ಲಿಸುವ ಹೋರಾಟ ನನ್ನದಾಗಿದೆ. ರಮೇಶ್ ಕರ್ಮಕಾಂಡವನ್ನು ಅವರ ಸಹೋದರರೇ ಹೇಳಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿಗೆ ದುರಹಂಕಾರವಿದೆ, ಜನರು ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ" ಎಂದಿದ್ದಾರೆ.












Click it and Unblock the Notifications