ಬೆಳಗಾವಿ; ಅಭ್ಯರ್ಥಿಗಳ ಚಿಹ್ನೆ ಬದಲು, ಚುನಾವಣೆ ಮುಂದೂಡಿಕೆ
ಬೆಳಗಾವಿ, ಡಿಸೆಂಬರ್ 27: ಗ್ರಾಮ ಪಂಚಾಯಿತಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿಗಳ ಚಿಹ್ನೆ ಬದಲಾದ ಹಿನ್ನಲೆಯಲ್ಲಿ ಮತದಾನವನ್ನು ಮುಂದೂಡಲಾಗಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿ ಚಿಹ್ನೆ ತಪ್ಪಾಗಿ ಮುದ್ರಣವಾಗಿದೆ.
ಭಾನುವಾರ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕದಂಪೂರ ವಾರ್ಡ್ ನಂಬರ್ 6ರಲ್ಲಿ ಚುನಾವಣೆ ಮುಂದೂಡಲಾಗಿದೆ. ಅಭ್ಯರ್ಥಿ ನಿರ್ಮಲಾ ಮಹಾಂತೇಶ ಖಾನಪೇಟ್ ಅವರಿಗೆ 'ಬಕೆಟ್' ಚಿಹ್ನೆ ನೀಡಲಾಗಿತ್ತು. ಆದರೆ, ಮತಪತ್ರದಲ್ಲಿ 'ಅಲ್ಮೇರಾ' ಚಿಹ್ನೆ ಮುದ್ರಣವಾಗಿದೆ.
ಚುನಾವಣಾಧಿಕಾರಿಗಳ ವಿರುದ್ಧ ಅಭ್ಯರ್ಥಿ ನಿರ್ಮಲಾ ಮಹಾಂತೇಶ ಖಾನಪೇಟ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಕೆಲವೇ ಹೊತ್ತಿನಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಆದ ತಪ್ಪು ಗಮನಕ್ಕೆ ಬಂದಿದೆ. ಬಳಿಕ ಮತದಾನ ಸ್ಥಗಿತವಾಗಿದೆ.

ಮತಗಟ್ಟೆ ಅಧಿಕಾರಿಗಳು, ಪೊಲೀಸರು ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿದರು. ಮತದಾನವನ್ನು ಸ್ಥಗಿತಗೊಳಿಸುವ ತೀರ್ಮಾನವನ್ನು ಕೈಗೊಂಡರು. ಕದಂಪೂರ ವಾರ್ಡ್ ನಂಬರ್ 6ರಲ್ಲಿ ಸೋಮವಾರ ಮತದಾನ ನಡೆಸಲು ತೀರ್ಮಾನಿಸಲಾಗಿದೆ.
ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಸಾವು; ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ನ್ಯಾಯವಾದಿ ಸಿ. ಬಿ. ಅಂಬೋಜಿ (64) ಎಂದು ಗುರುತಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ವಾರ್ಡ್ ನಂಬರ್ 2ರಿಂದ ಸಿ. ಬಿ. ಅಂಬೋಜಿ ಚುನಾವಣೆಗೆ ಸ್ಪರ್ಧಿಸಿದ್ದರು. ಗ್ರಾಮದಲ್ಲಿ ಡಿಸೆಂಬರ್ 22ರಂದು ಮತದಾನವಾಗಿತ್ತು. ಡಿಸೆಂಬರ್ 30ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಖಾನಾಪುರ ತಾಲೂಕಿನಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದ ಸಿ. ಬಿ. ಅಂಬೋಜಿ ಅವರು 15 ವರ್ಷದಿಂದ ಕಕ್ಕೇರಿ ಬಿಷ್ಟಮ್ಮದೇವಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿದ್ದರು. ಸಿ. ಬಿ. ಅಂಬೋಜಿ ನಿಧನದಿಂದಾಗಿ ಕಕ್ಕೇರಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.











Click it and Unblock the Notifications