ಮಹಾನಗರ ಪಾಲಿಕೆ ಚುನಾವಣೆ ಘೋಷಣೆ; ಈಶ್ವರಪ್ಪಗೆ ಅಚ್ಚರಿ
ಬೆಳಗಾವಿ, ಆಗಸ್ಟ್ 11; ರಾಜ್ಯ ಚುನಾವಣಾ ಆಯೋಗ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ಘೋಷಣೆ ಮಾಡಿದೆ. 3/9/2021ರಂದು ಚುನಾವಣೆ ನಡೆಸುವುದಾಗಿ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಬುಧವಾರ ಬೆಳಗಾವಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ಈ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಚುನಾವಣೆ ಘೋಷಣೆ ಕುರಿತು ಅವರ ಪ್ರಶ್ನೆಗಳನ್ನು ಎತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಚುನಾವಣೆ ಘೋಷಣೆ ಏಕೆ ಘೋಷಣೆ ಮಾಡಿದರೋ ನನಗಂತೂ ಆಶ್ಚರ್ಯವಾಗಿದೆ" ಎಂದರು. ಈ ಮೂಲಕ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

"ಕೋವಿಡ್ ಕೋವಿಡ್ ಅಂತಾರೆ, ನಾವು ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ಮಾಡುತ್ತಿದ್ದೇವೆ. ಚುನಾವಣೆ ಘೋಷಣೆ ಬಗ್ಗೆ ಹೇಳುವಷ್ಟು ನಾನು ದೊಡ್ಡವನಲ್ಲ. ಚುನಾವಣಾ ಆಯೋಗದವರು ಗಮನಿಸಬೇಕು ಇದನ್ನು" ಎಂದು ಸಚಿವರು ಹೇಳಿದರು.
"ಇವತ್ತು ಕೋರ್ಟ್ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸರ್ಕಾರಕ್ಕೆ ಕೇಳಿದ್ದಾರೆ, ಚುನಾವಣಾ ಆಯೋಗಕ್ಕೂ ಕೇಳಿದ್ದಾರೆ. ನಾವು ಇವತ್ತು ವರದಿ ಕೊಡ್ತಿದ್ದೇವೆ ಅಷ್ಟರಲ್ಲೇ ಚುನಾವಣೆ ಘೋಷಣೆ ಮಾಡಿದರೆ ನಾನೇನು ಹೇಳಲಿ?. ಚುನಾವಣಾ ಆಯೋಗ ತಗೆದುಕೊಳ್ಳುವ ತೀರ್ಮಾನದ ಬಗ್ಗೆ ನನಗೆ ಸಮಾಧಾನ ಇಲ್ಲ" ಎಂದರು.
"ನಾನು ಟೀಕೆ ಮಾಡಲು ಹೋಗುತ್ತಿಲ್ಲ. ಬೆಳಗಾವಿ, ಕಲಬುರಗಿ ಮಹಾರಾಷ್ಟ್ರ ಗಡಿ ಪ್ರದೇಶವಾಗಿದೆ. ಕೋವಿಡ್ ಮೂರನೇ ಅಲೆ ಬಗ್ಗೆ ಹುಷಾರಾಗಿರಿ ಅಂತಾ ಪ್ರಧಾನಿ ಹೇಳುತ್ತಿದ್ದಾರೆ. ಕೋರ್ಟ್‌ಗಳು ಸಹ ಹೇಳುತ್ತಿವೆ. ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದರೆ ನಾವು ಯಾರನ್ನು ಕೇಳೋಣ?" ಎಂದು ಈಶ್ವರಪ್ಪ ಪ್ರಶ್ನಿಸಿದರು.
"ಒಂದು ರಾಜಕೀಯ ಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತೇವೆ. ಚುನಾವಣೆ ಎದುರಿಸುತ್ತೇವೆ. ಯಾರು ಗೆಲ್ಲುತ್ತಾರೋ, ಸೋಲುತ್ತಾರೋ ಆ ಪ್ರಶ್ನೆ ಬೇರೆ. ಕೋವಿಡ್ ಇರುವಂತಹ ಸಂದರ್ಭದಲ್ಲಿ ಅಂತಹ ತುರ್ತು ಏನಿತ್ತು?. ಮಹಾನಗರ ಪಾಲಿಕೆ ಚುನಾವಣೆ ಮಾಡಲೇಬೇಕು ಅಂತಾ ಏನಿದೆ?" ಎಂದು ಸಚಿವರು ಕೇಳಿದರು.
"ಯಾರು ಕೇಳಿದ್ದರು ನಿಮ್ಮನ್ನು?, ಡಿಸೆಂಬರ್‌ವರೆಗೂ ಯಾವ ಚುನಾವಣೆಯೂ ಬೇಡ ಎಂದು ಕೋರ್ಟ್ ಮಧ್ಯಂತರ ಆದೇಶ ಕೊಟ್ಟಿದೆ. ಎಜಿ ಹತ್ತಿರ ಮಾತನಾಡಿ ಯಾವುದೇ ಕಾರಣಕ್ಕೂ ಚುನಾವಣೆ ಬೇಡ ಅಂತಾ ವರದಿ ಕೊಟ್ಟಿದ್ದೇವೆ. ಚುನಾವಣೆ ಆಯೋಗಕ್ಕೆ ಪೂರ್ಣ ಅಧಿಕಾರವಿದೆ. ವಿಧಿ ಇಲ್ಲ ಚುನಾವಣೆ ಮಾಡಬೇಕು ಅಷ್ಟೇ, ನಾವು ನೋಡೋಣ" ಎಂದರು.
ಚುನಾವಣಾ ವೇಳಾಪಟ್ಟಿ; ರಾಜ್ಯ ಚುನಾವಣಾ ಆಯೋಗ ಬುಧವಾರ ಮೂರು ಮಹಾನಗರ ಪಾಲಿಕೆಗೆ ಚುನಾವಣಾ ದಿನಾಂಕ ಘೋಷಣೆ ಮಾಡಿದೆ. ಬೆಳಗಾವಿ (58) ವಾರ್ಡ್, ಹುಬ್ಬಳ್ಳಿ-ಧಾರವಾಡ (82) ವಾರ್ಡ್, ಕಲಬುರಗಿ (55) ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.
16/82021ರಂದು ಚುನಾವಣಾ ಅಧಿಸೂಚನೆಯನ್ನು ಪ್ರಕಟಿಸಲಾಗುತ್ತದೆ. 23/8/2021 ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕವಾಗಿದೆ. 26/8/2021ರ ತನಕ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶವಿದೆ.
ಅಗತ್ಯವಿದ್ದರೆ 3/9/2021ರಂದು ಮತದಾನ ನಡೆಸಲಾಗುತ್ತದೆ. ಮರು ಮತದಾನ ಅಗತ್ಯವಿದ್ದರೆ 5/9/2021ರಂದು ಮರು ಮತದಾನ ನಡೆಯಲಿದೆ. ಮತಗಳ ಎಣಿಕೆ 6/9/2021ರಂದು ನಡೆಯಲಿದೆ.
ಡಿಸೆಂಬರ್ ತನಕ ಚುನಾವಣೆ ಬೇಡ; ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳ ತನಕ ಯಾವುದೇ ಚುನಾವಣೆ ನಡೆಸುವುದು ಬೇಡ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದ್ದರಿಂದ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಸಹ ಮುಂದೂಡಲಾಗಿತ್ತು. ಆದರೆ ಈಗ ಮಹಾನಗರ ಪಾಲಿಕೆ ಚುನಾವಣೆ ಘೋಷಣೆ ಆಗಿರುವುದು ಗೊಂದಲಕ್ಕೆ ಕಾರಣವಾಗಿದೆ.












Click it and Unblock the Notifications