ಬೆಂಗಳೂರಿನಲ್ಲಿ ಓಡಿಸಿದ ಹಳೇ BMTC ಬಸ್‌ಗಳನ್ನು ಬೆಳಗಾವಿಗೆ ಬಿಡಲು ನಿರ್ಧಾರ: ಈ ನಿಲುವು ಸರಿಯೇ?
ಬೆಳಗಾವಿ, ಜನವರಿ, 24: ಬೆಂಗಳೂರಿನಲ್ಲಿ ಈಗಾಗಲೇ ನೂತವಾಗಿ ತಯಾರಾದ ಎಲೆಕ್ಟ್ರಿಕ್ ಬಿಎಂಟಿಸಿ ಬಸ್‌ಗಳನ್ನು ಬಿಡಲಾಗಿದೆ. ದಿನದಿಂದ ದಿನಕ್ಕೆ ಬೆಂಗಳೂರಿಗೆ ನೂತನ ಆವಿಷ್ಕಾರದ ಬಸ್‌ಗಳು ಬರುತ್ತಲೇ ಇವೆ. ಆದರೆ ಹಳೆ ಬಸ್‌ಗಳು ಕೂಡ ಗುಜರಿ ಹಂತಕ್ಕೆ ತಲುಪಿದ್ದು, ಈ ಹಳೆ ಬಸ್‌ಗಳನ್ನು ಏನು ಮಾಡುತ್ತಾರೆ ಎನ್ನುವುದೇ ಜನಸಾಮಾನ್ಯರಲ್ಲಿ ಕಾಡುವ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಸಾರಿಗೆ ಇಲಾಖೆ ಹಳ್ಳ ಹಿಡಿದ ಬಿಎಂಟಿಸಿ ಬಸ್‌ಗಳನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ವಿಭಾಗಗಳಿಗೆ ಬಿಡಲು ನಿರ್ಧರಿಸಿದೆ. ಈ ನಿರ್ಧಾರವು ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸವರಿದಂತೆ ಕಾಣುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶಗಳು ಭುಗಿಲೆದ್ದಿವೆ.
ಸಾರಿಗೆ ಇಲಾಖೆ ನಿಲುವಿನ ವಿರುದ್ಧ ಆಕ್ರೋಶ
ಬೆಂಗಳೂರಿಗೆ ಬೆಣ್ಣೆ, ಬೆಳಗಾವಿಗೆ ಸುಣ್ಣ ಎಂಬ ನಡೆಯನ್ನು ಈಗಿನ ರಾಜ್ಯ ಸರ್ಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಓಡಿಸಿದ ಬಿಎಂಟಿಸಿ ಹಳೆಯ ಬಸ್‌ಗಳನ್ನೇ ಹುಬ್ಬಳ್ಳಿ, ಬೆಳಗಾವಿಗೆ ರವಾನಿಸಿದ್ದು, ಎನ್‌ಡಬ್ಲ್ಯೂಕೆಆರ್‌ಟಿಸಿ (NWKSRTC) ಹುಬ್ಬಳ್ಳಿ, ಬೆಳಗಾವಿ ವಿಭಾಗಕ್ಕೆ ತಲಾ 50 ಹಳೇ ಬಿಎಂಟಿಸಿ ಬಸ್‌ಗಳನ್ನು ಸಾರಿಗೆ ಇಲಾಖೆ ನೀಡಿದೆ.
ಬೆಂಗಳೂರಿನಲ್ಲಿರುವ ಬಿಎಂಟಿಸಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂತನ ಬಸ್‌ಗಳನ್ನು ಖರೀದಿಸಿದ್ದಾರೆ. ಆದರೆ ಬಿಎಂಟಿಸಿಯ ಹಳ್ಳ ಹಿಡಿದ ಬಸ್‌ಗಳನ್ನು ಕುಂದಾನಗರಿ ಬೆಳಗಾವಿ, ಅವಳಿ ನಗರ ಹುಬ್ಬಳ್ಳಿ ಜಿಲ್ಲೆಗೆ ಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಂತಿದೆ.

ಹಳ್ಳ ಹಿಡಿದ ಬಸ್‌ಗಳ ಸಂಚಾರ
ಈಗಾಗಲೇ 5ರಿಂದ 6 ಲಕ್ಷ ಕಿಲೋ ಮೀಟರ್ ಓಡಿರುವ ಬಿಎಂಟಿಸಿ ಬಸ್‌ಗಳನ್ನು ಬೆಳಗಾವಿ, ಹುಬ್ಬಳಿಗೆ ರವಾನಿಸಲಾಗಿದೆ. ಅದರಲ್ಲಿ ಬೆಳಗಾವಿ ವಿಭಾಗವೊಂದರಲ್ಲೇ 10 ಲಕ್ಷ ಕಿಲೋ ಮೀಟರ್‌ಗೂ ಹೆಚ್ಚು ಓಡಿದ 300 ಬಸ್‌ಗಳಿವೆ. ಇಷ್ಟೊಂದು ಹಳೆಯ ಬಸ್‌ಗಳಿದ್ದರೂ ಕೂಡ ಸಾರಿಗೆ ಇಲಾಖೆ ಇದುವರೆಗೂ ಬದಲಾವಣೆಗೆ ಮುಂದಾಗಿಲ್ಲ ಎನ್ನುವ ಗಂಭೀರ ಆರೋಪ ಕೇಳಿಬರುತ್ತಿವೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ
ಸಾರಿಗೆ ಇಲಾಖೆ ಬೆಳಗಾವಿ ಡಿಪೋ ನಂಬರ್ 2ಕ್ಕೆ 50 ಹಳೆಯ ಬಿಎಂಟಿಸಿ (BMTC)ಬಸ್‌ಗಳನ್ನು ನೀಡಿದ್ದು, ಸದ್ಯ ಬಸ್‌ಗಳು ನಗರದಿಂದ ತಾಲೂಕು ವ್ಯಾಪ್ತಿಯಲ್ಲಿ ಸಂಚಾರ ಆರಂಭಿಸಿವೆ. ಆದರೆ ಇತ್ತೀಚೆಗಷ್ಟೇ ಚಲಿಸುತ್ತಿದ್ದ ಬಸ್‌ವೊಂದರ ಫುಟ್‌ರೆಸ್ಟ್ ಮುರಿದಿದೆ. ಬೆಳಗಾವಿ ನಗರದಿಂದ ರಾಮತೀರ್ಥ ನಗರದ ಮಧ್ಯೆ ಸಂಚರಿಸುತ್ತಿದ್ದ ಬಸ್‌ನ ಫುಟ್‌ರೆಸ್ಟ್ ತುಂಡಾಗಿತ್ತು. ಫುಟ್‌ರೆಸ್ಟ್ ತುಂಡಾಗಿರುವ ಬಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದೃಷ್ಟವಶಾತ್ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇಂತಹ ಅನಾಹುತಗಳು ಮರುಕಳಿಸದಂತೆ ಸಾರಿಗೆ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆನ್ನುವುದೇ ಜನರ ಅಭಿಪ್ರಾಯವಾಗಿದೆ. ಇನ್ನು ಸಾರಿಗೆ ಇಲಾಖೆ ನೀಡಿರುವ ಹಳೇ ಬಸ್‌ಗಳಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಸಂಚಾರ ಮಾಡುತ್ತಾರೆ. ಆದ್ದರಿಂದ ಮುಂಜಾಗ್ರತಾವಾಗಿ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವ ಅಭಿಪ್ರಾಯಗಳು ಜೋರಾಗಿಯೇ ಕೇಳಿಬರುತ್ತಿವೆ.












Click it and Unblock the Notifications