ಬೆಳಗಾವಿ ಅಧಿವೇಶನ 2023; ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ
ಬೆಳಗಾವಿ, ನವೆಂಬರ್ 23: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಡಿಸೆಂಬರ್ 4ರಿಂದ 15ರ ತನಕ ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ಈಗಾಗಲೇ ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಚಳಿಗಾಲದ ಅಧಿವೇಶನದ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ. ಡಿಸೆಂಬರ್ 4ರಂದು ಬೆಳಗ್ಗೆ 11 ಗಂಟೆಗೆ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭವಾಗಲಿದೆ. ಪ್ರತಿಪಕ್ಷ ನಾಯಕರು ಆಯ್ಕೆಯಾದ ಮೇಲೆ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿವೇಶನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ, ಅಪರ ಜಿಲ್ಲಾಧಿಕಾರಿ ವಿಜಕುಮಾರ್ ಹೊನಕೇರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್ ಮುಂತಾದವರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಸೂಚನೆ; ವಿಧಾನಮಂಡಲ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ವಸತಿ, ಊಟೋಪಹಾರ, ಸಾರಿಗೆ ಸೇರಿದಂತೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಪ್ರತಿಯೊಂದು ಸಿದ್ಧತೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅಧಿವೇಶನ ವೇಳೆ ಸಚಿವರು, ಗಣ್ಯರು, ಉನ್ನತ ಮಟ್ಟದ ಅಧಿಕಾರಿಗಳು ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಇದಲ್ಲದೇ ಸುವರ್ಣ ವಿಧಾನಸೌಧ ಬಳಿ ವಿವಿಧ ಸಂಘ-ಸಂಸ್ಥೆಗಳು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿವೆ. ಆದ್ದರಿಂದ ಪ್ರತಿ ವರ್ಷದಂತೆ ಪ್ರತಿಭಟನಾ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಇಂಟರ್ ನೆಟ್ ಸಂಪರ್ಕ, ವಿದ್ಯುತ್ ಸಂಪರ್ಕ, ಶಾಮಿಯಾನಾ, ಬ್ಯಾರಿಕೇಡ್, ಪಾರ್ಕಿಂಗ್ ಮತ್ತಿತರ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಸಂಬಂಧಿಸಿದ ಸಮಿತಿಯ ಅಧಿಕಾರಿಗಳು ಮುಂಚಿತವಾಗಿಯೇ ಪ್ರತಿಯೊಂದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬೆಳಗಾವಿ ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿರುವ ವಿದ್ಯುತ್ ಕಂಬಗಳು, ಮರ-ಗಿಡಗಳು, ಗೋಡೆಗಳು ಸೇರಿದಂತೆ ವಿವಿಧ ಕಡೆಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಹಾಕಲಾಗಿರುತ್ತದೆ. ಅಂತಹ ಅನಧಿಕೃತ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ಕೊಟ್ಟರು.
ನಗರದಲ್ಲಿ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ಮತ್ತು ಗೋಡೆ, ಮರಗಳ ಮೇಲೆ ಕೋಚಿಂಗ್ ಸೆಂಟರ್, ಖಾಸಗಿ ಮಳಿಗೆಗಳು, ವಾಣಿಜ್ಯ ವಹಿವಾಟುಗಳಿಗೆ ಸಂಬಂಧಿಸಿದಂತಹ ಜಾಹೀರಾತುಗಳನ್ನು ಹಾಕಲಾಗಿರುತ್ತದೆ. ಇದರಿಂದ ವಿದ್ಯುತ್ ತಂತಿ ಹರಿದು ಅನಾಹುತವಾಗುವ ಸಾಧ್ಯತೆಗಳಿವೆ. ಆದ್ದರಿಂದ ಅನಧಿಕೃತ ಜಾಹೀರಾತುಗಳನ್ನು ಹಾಕುವ ಕಂಪನಿ ಅಥವಾ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ನಿರ್ದೇಶನ ನೀಡಿದರು.
ಅಧಿವೇಶನದ ಸಂದರ್ಭದ ಪೊಲೀಸ್ ಭದ್ರತೆ ಬಗ್ಗೆ ಪೊಲೀಸ್ ಆಯುಕ್ತ ಎಸ್. ಎನ್. ಸಿದ್ದರಾಮಪ್ಪ ಮಾತನಾಡಿ, "ಭದ್ರತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದು, ಅವರಿಗೆ ಸಮರ್ಪಕ ವಸತಿ ಹಾಗೂ ಊಟೋಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು" ಎಂದು ತಿಳಿಸಿದರು.
ಸುವರ್ಣ ವಿಧಾನಸೌಧಕ್ಕೆ ಈಗಾಗಲೇ ವಿಧಾನಸಭೆ ಸಭಾಧ್ಯಕ್ಷ ಯು. ಟಿ. ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಅಧಿವೇಶನದ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ವಿಧಾನಸಭೆ ಸಭಾಂಗಣ, ಸಭಾಧ್ಯಕ್ಷರ ಕೊಠಡಿ, ಸೆಂಟ್ರಲ್ ಹಾಲ್, ಪರಿಷತ್ ಸಭಾಂಗಣ, ಸಭಾಪತಿ ಕೊಠಡಿ. ವಿರೋಧ ಪಕ್ಷದ ಮೊಗಸಾಲೆ, ಮಂತ್ರಿಗಳ ಮೊಗಸಾಲೆ, ಕ್ಯಾಬಿನೆಟ್ ಹಾಲ್, ಆಡಿಟೋರಿಯಂ ಮತ್ತಿತರ ಸ್ಥಳಗಳನ್ನು ಪರಿಶೀಲಿಸಿದ್ದಾರೆ.
ಧ್ವನಿವರ್ಧಕ, ಸ್ವಚ್ಛತೆ, ಆಸನ ವ್ಯವಸ್ಥೆ, ವಿದ್ಯುಚ್ಛಕ್ತಿ, ಇಂಟರ್‌ನೆಟ್ ಸಂಪರ್ಕ, ಟಿವಿ ಪರದೆ, ಕಂಪ್ಯೂಟರ್ ಸೇರಿದಂತೆ ಅಧಿವೇಶನ ಸಂದರ್ಭದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಧಾನಸಭೆ ಸಭಾಂಗಣದಲ್ಲಿ ದೊಡ್ಡ ಪರದೆಯ ಟಿವಿ ಅಳವಡಿಸಬೇಕು. ಸಭಾಧ್ಯಕ್ಷರ ಕುರ್ಚಿ ಎದುರು ಎಲ್ಲ ಶಾಸಕರ ಹೆಸರು ಹಾಗೂ ಆಸನ ಸಂಖ್ಯೆಯ ಮಾಹಿತಿಯನ್ನು ಪ್ರದರ್ಶಿಸುವ ಚಾರ್ಟ್ ಅಳವಡಿಸಬೇಕು ಎಂದು ತಿಳಿಸಿದ್ದಾರೆ.
ಸುವರ್ಣ ವಿಧಾನಸೌಧ ಕಟ್ಟಡವನ್ನು ವೀಕ್ಷಿಸಿದ ಸ್ಪೀಕರ್ ಯು. ಟಿ. ಖಾದರ್ ಪಶ್ಚಿಮ ಪ್ರವೇಶದ್ವಾರದ ಕೆಲವು ಕಡೆಗಳಲ್ಲಿ ಬಣ್ಣ ಮಾಸಿರುವುದು ಹಾಗೂ ಕಲೆಗಳಿರುವುದನ್ನು ಸರಿಪಡಿಸಲು ಸೂಚಿಸಿದರಲ್ಲದೇ ವರ್ಷವಿಡೀ ಸುವರ್ಣ ಸೌಧದ ಉತ್ತಮ ನಿರ್ವಹಣೆಗೆ ಸಂಬಂಧಿಸಿದಂತೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.












Click it and Unblock the Notifications