7700 ಕೋಟಿ ವೆಚ್ಚ ಮಾಡಲು ವಿಧಾನಸಭೆಯಲ್ಲಿ ಒಪ್ಪಿಗೆ
ಬೆಳಗಾವಿ, ಡಿ. 4 : 2013-14ನೇ ಸಾಲಿನ ಪೂರಕ ಅಂದಾಜುಗಳ ಬಜೆಟ್ ಗೆ ಸದನದಲ್ಲಿ ಮಂಗಳವಾರ ಅನುಮೋದನೆ ದೊರಕಿದೆ. ಸರ್ಕಾರದ ನೂತನ ಜನಪರ ಕಾರ್ಯಕ್ರಮಗಳಿಗಾಗಿ 295 ಕೋಟಿ ರೂಗಳ ಹೆಚ್ಚುವರಿ ಸಂಪನ್ಮೂಲ ಕ್ರೂಢೀಕರಣ ಮಾಡುವುದಾಗಿ ತಿಳಿಸಿದ ಸಿಎಂ ಸಿದ್ದರಾಮುಯ್ಯ ಪೂರಕ ಬಜೆಟ್ ಗೆ ಧ್ವನಿಮತದ ಅಂಗೀಕಾರ ಪಡೆದರು.
ಪೂರಕ ಬಜೆಟ್ ನಲ್ಲಿ ಬೆಂಗಳೂರು ಮೆಟ್ರೋಗಾಗಿ 175 ಕೋಟಿ, ಬೆಂಗಳೂರು ಮಹಾನಗರ ಪಾಲಿಕೆಗೆ 633 ಕೋಟಿ, ಸಾಮಾಜಿಕ ಭಧ್ರತಾ ಯೋಜನೆಯಾದ ಭಾಗ್ಯ ಲಕ್ಷ್ಮಿಗಾಗಿ 198 ಕೋಟಿ, ಆಶ್ರಯ ಮನೆ ಯೋಜನೆಗೆ 671 ಕೋಟಿ, ಹಾಲು ಉತ್ಪಾದಕರಿಗೆ 375 ಕೋಟಿ, 10.5 ಲಕ್ಷ ರೈತರಿಗೆ ಸಾಲ ವಿತರಣೆಗಾಗಿ 4,300 ಕೋಟಿ ನೀಡುವ ಗುರಿ ಹೊಂದಲಾಗಿದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದರು.

ವಿಶ್ವ ಮತ್ತು ರಾಷ್ಟ್ರ ಮಟ್ಟದಲ್ಲಿ ಅರ್ಥ ವ್ಯವಸ್ಥೆ ನಿಧಾನಗತಿಯಲ್ಲಿದೆ. ಇದರ ಪರಿಣಾಮ ರಾಜ್ಯದ ಮೇಲೂ ಉಂಟಾಗಿದೆ. ಆದ್ದರಿಂದ ಮೋಟಾರು ವಾಹನ ತೆರಿಗೆ, ಗಣಿ ರಾಯಲ್ಟಿ ಯಲ್ಲಿ ಮಾತ್ರ ಆದಾಯ ಸಂಗ್ರಹಣೆ ಪ್ರಮಾಣ 350 ಕೋಟಿ ರೂ ಗಳಷ್ಟು ಕಡಿಮೆಯಾಗಲಿದ್ದು, ವಾಣಿಜ್ಯ ಮತ್ತು ಅಬಕಾರಿ ತೆರಿಗೆ ಸಂಗ್ರಹದಲ್ಲಿ ಶೇ 48 ರಷ್ಟು ಪ್ರಗತಿಯಾಗಿದೆ ಎಂದರು. (ಬೆಳಗಾವಿ : ಮಂಗಳವಾರ ಸದನದಲ್ಲಿ ಆಗಿದ್ದೇನು?)
ರಾಜ್ಯದ ಸ್ವಂತ ವಾಣಿಜ್ಯ ತೆರಿಗೆ 37,740 ಕೋಟಿ ಇದ್ದು ಅಕ್ಟೋಬರ್ ವರೆಗೆ 20, 334 ಕೋಟಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದಾಗ ರಾಜ್ಯದಲ್ಲಿ ಶೇ 13 ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದ ಸಿಎಂ, ಮಹಾರಾಷ್ಟ್ರದಲ್ಲಿ ಶೇ 7, ಕೇರಳದಲ್ಲಿ ಶೇ 12 ತಮಿಳುನಾಡಿನಲ್ಲಿ ಶೇ 4ರಷ್ಟು ತೆರಿಗೆ ಸಂಗ್ರಹಿಸಲಾಗಿದೆ. ಇದಕ್ಕೆ ಹೋಲಿಸಿದರೆ ರಾಜ್ಯದ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ತಿಳಿಸಿದರು.
ರೈಲ್ವೇ ಯೋಜನೆಗಳಿಗೆ ಅನುದಾನ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲಾದ 373 ಕೋಟಿ ರೂ.ಗಳನ್ನು ನೀಡಬೇಕಾಗಿದೆ. ಇದನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುದು ಎಂದು ಸಿಎಂ ಸದನಕ್ಕೆ ವಿವರಣೆ ನೀಡಿ, ಪೂರಕ ಬಜೆಟ್ ಗೆ ಅನುಮೋದನೆ ಪಡೆದರು.












Click it and Unblock the Notifications