ಬೆಳಗಾವಿಯ 3 ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಡ್ರೈ ರನ್ ಆರಂಭ
ಬೆಳಗಾವಿ, ಜನೆವರಿ 2: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂರು ಕೋವಿಡ್-19 ಮಾದರಿ ಲಸಿಕಾ ಕೇಂದ್ರ ಸ್ಥಾಪನೆ ಮಾಡಲಾಗಿದ್ದು, ಬೆಳಗಾವಿಯ ವಂಟಮುರಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಸಮುದಾಯ ಆರೋಗ್ಯ ಕೇಂದ್ರ, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಮಾದರಿ ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ.
ಬೆಳಗಾವಿಯಲ್ಲಿ ಕೊರೊನಾ ಲಸಿಕೆ ಡ್ರೈ ರನ್ ವಂಟಮೂರಿ ಕಾಲೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಸಂಜಯ್ ಡುಮ್ಮಗೋಳ ನೇತೃತ್ವದಲ್ಲಿ ಅಣಕು ಕಾರ್ಯಾಚರಣೆ ಆರಂಭವಾಗಿದೆ. ಮೊದಲು ಹತ್ತು ಜನರ ಮೇಲೆ ಲಸಿಕೆ ಡೆಮೊ ಮಾಡಲಾಗುತ್ತದೆ.
ಮೈಸೂರು: ಮೂರು ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಣಕು ಕಾರ್ಯಾಚರಣೆ
ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಸಿದ 75 ಜನರಿಗೆ ಡ್ರೈ ರನ್ ಮಾಡಲಾಗುತ್ತಿದ್ದು, ಬೆಳಗಾವಿ ಜಿಲ್ಲೆಯ ಒಟ್ಟು 28,195 ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಸಿದ್ದಾರೆ.
ಕೋವಿಡ್ ಲಸಿಕಾ ಕೇಂದ್ರದಲ್ಲಿ ಒಂದು ಸೆಷನ್‌ಗೆ ಐವರು ಸಿಬ್ಬಂದಿ ನಿಯೋಜನೆಗೊಂಡಿದ್ದು, ಮೊದಲು ಲಸಿಕೆ ಪಡೆಯುವವರನ್ನು ಸಿಬ್ಬಂದಿ ವೇಟಿಂಗ್ ರೂಮ್‌ನಲ್ಲಿ ಕೂರಿಸುವರು. ಬಳಿಕ ಕೋವಿನ್ ಪೋರ್ಟಲ್‌ನಲ್ಲಿ ದಾಖಲಾತಿಗಳ ಪರಿಶೀಲನೆ ಮಾಡಲಾಗುತ್ತದೆ.
ದಾಖಲಾತಿ ಪರಿಶೀಲನೆ ಬಳಿಕ ಲಸಿಕೆ ನೀಡುವ ಬಗ್ಗೆ ರಿಹರ್ಸಲ್ ನಡೆಯುತ್ತದೆ. ಲಸಿಕೆ ನೀಡಿದ ಬಳಿಕ ಲಸಿಕೆ ಪಡೆದ ಬಗ್ಗೆ ಪ್ರಮಾಣ ಪತ್ರ ನೀಡುತ್ತಾರೆ. ಲಸಿಕೆ ಪಡೆದವರ ಮೇಲೆ ಆಬ್ಸರ್ವೇಷನ್ ರೂಮ್‌ನಲ್ಲಿ 30 ನಿಮಿಷಗಳ ಕಾಲ ನಿಗಾ ವಹಿಸಲಾಗುತ್ತದೆ.
ಲಸಿಕೆ ಪಡೆದವರ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಅಡ್ವರ್ಸ್ ಇವೆಂಟ್ ಫಾಲೋವಿಂಗ್ ಇಮ್ಯುನೈಸೇಷನ್ (ಎಐಎಫ್ಐ) ವಿಭಾಗಕ್ಕೆ ರವಾನಿಸಲಾಗುತ್ತದೆ. ಎಐಎಫ್‌ಐ ಘಟಕದಲ್ಲಿ ಓರ್ವ ಅರವಳಿಕೆ ತಜ್ಞರು, ಇಬ್ಬರು ಸ್ಟಾಫ್ ನರ್ಸ್, ಓರ್ವ ಆ್ಯಂಬುಲೆನ್ಸ್ ಚಾಲಕನನ್ನು ನಿಯೋಜನೆ ಮಾಡಲಾಗಿದೆ. ಒಂದು ಗಂಟೆಯಲ್ಲಿ ಕೇವಲ 10 ಜನರಿಗೆ ಮಾತ್ರ ವ್ಯಾಕ್ಸಿನೇಷನ್ ನೀಡಲಾಗುತ್ತದೆ.