ಮೈತ್ರಿ ಮಾಡಿಕೊಳ್ಳದಿದ್ದರೆ ಬಿಜೆಪಿಗೆ ನಷ್ಟ : ಯಡಿಯೂರಪ್ಪ
ಬೆಳಗಾವಿ, ಅ.1 : ಬಿಜೆಪಿ ಜೊತೆಗಿನ ಮೈತ್ರಿ ಮಾತುಕತೆ ನಡೆಯುತ್ತಿರುವ ಹೊತ್ತಿನಲ್ಲೇ, ಕೆಜೆಪಿ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳದಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳಲಿದೆ ಎಂದು ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕೆಜೆಪಿ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ, ಕಾಂಗ್ರೆಸ್ ಕರ್ನಾಟಕದಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಲಿದೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಹೊಂದಾಣಿಕೆ ಮಾಡಿಕೊಂಡರೆ ಎರಡೂ ಪಕ್ಷಗಳಿಗೂ ಉತ್ತಮ ಎಂಬ ಸಂದೇಶವನ್ನು ಬಿಜೆಪಿ ನಾಯಕರಿಗೆ ತಲುಪಿಸಿದರು. ಬಿಜೆಪಿ ಹೊಂದಾಣಿಕೆ ಮಾಡಿಕೊಂಡರೆ ಎರಡೂ ಪಕ್ಷಗಳು ಸೇರಿ ಅಧಿಕ ಸ್ಥಾನ ಪಡೆಯಬಹುದು ಎಂದು ಅವರು ವಿಶ್ಲೇಷಿಸಿದರು.
ಈ ಹೇಳಿಕೆ ಮೂಲಕ ಕೆಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ವಿಳಂಬ ನೀತಿ ಅನುಸರಿಸುತ್ತಿರುವ ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಪರೋಕ್ಷ ಎಚ್ಚರಿಕೆ ರವಾನಿಸಿದ್ದಾರೆ. ಮೈತ್ರಿ ಮಾತುಕತೆ ಮುರಿದು ಬಿದ್ದರೆ, ನಿಮಗೆ ಸೋಲು ಎಂದು ಬಿಜೆಪಿಗೆ ಮನವರಿಕೆ ಮಾಡಿಕೊಡುಲು ಯತ್ನಿಸುತ್ತಿದ್ದಾರೆ.
ಬೆಳಗಾವಿ ಸೇರಿದಂತೆ 12 ಲೋಕಸಭಾ ಕ್ಷೇತ್ರಗಳಲ್ಲಿ ಕೆಜೆಪಿ ಸ್ಪರ್ಧೆ ಮಾಡಲಿದೆ. ಕೆಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ, ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅವಕಾಶ ದೊರೆಯುವುದಿಲ್ಲ ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.
ಮೊದಲು ನಾನು ತೃತೀಯ ರಂಗಕ್ಕೆ ಬೆಂಬಲ ಸೂಚಿಸುವುದಾಗಿ ಘೋಷಿಸಿದ್ದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸಿದ್ದರಿಂದ ಎನ್ ಡಿಎ ಮೈತ್ರಿ ಕೂಟಕ್ಕೆ ಬೆಂಬಲ ನೀಡಲು ಇಚ್ಛಿಸಿದ್ದೇನೆ ಎಂದು ಹೇಳಿದರು.
ಕೆಜೆಪಿ ಮತ್ತು ಬಿಜೆಪಿ ವಿಲೀನ ಪ್ರಕ್ರಿಯೆಗಳು ಈಗಾಗಲೇ ಮುರಿದು ಬಿದ್ದಿವೆ. ಎರಡೂ ಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿವೆ. ಆದರೆ, ಬಿಜೆಪಿ ನಾಯಕರು ಮೈತ್ರಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದ್ದರಿಂದ ಯಡಿಯೂರಪ್ಪ ಪಕ್ಷದ ಮೇಲೆ ಒತ್ತಡ ಹಾಕಲು ಇಂತಹ ಹೇಳಿಕೆ ನೀಡಿರಬಹುದು.












Click it and Unblock the Notifications