ಶ್ರೀರಾಮಸೇನೆ ನಿಷೇಧಿಸಿದ ಬಿಜೆಪಿಗೆ ಬಜರಂಗದಳ ನಿಷೇಧ ವಿಚಾರದಲ್ಲಿ ಮಾತನಾಡುವ ಹಕ್ಕಿಲ್ಲ: ಜೈರಾಮ್ ರಮೇಶ್
ಬೆಳಗಾವಿ, ಮೇ 06: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ನಂತರ ಶುರುವಾದ ಬಜರಂಗದ ಪರ-ವಿರೋಧದ ಚರ್ಚೆ, ಏಟು-ಎದಿರೇಟುಗಳು ಅಬ್ಬರ ಇನ್ನೂ ಮುಗಿದಿಲ್ಲ. ಇದೀಗ ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅವರು ಕಾಂಗ್ರೆಸ್ ನಿರ್ಧಾರ ಬಗ್ಗೆ ಬಿಜೆಪಿಗೆ ಮಾತನಾಡುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ಗೋವಾ ರಾಜ್ಯದಲ್ಲಿ ಬಿಜೆಪಿ ಶ್ರೀರಾಮಸೇನೆಯನ್ನು ನಿಷೇಧಿಸಿದೆ. ಇಂತವರು ಬಜರಂಗದಳವನ್ನು ನಿಷೇಧಿಸುವ ಕಾಂಗ್ರೆಸ್ ನಿರ್ಧಾರದ ಕುರಿತು ಮಾತನಾಡುವ ಹಕ್ಕು ಕಳೆದುಕೊಂಡಿದ್ದಾರೆ. ಬಜರಂಗದಳ ಮತ್ತು ಬಜರಂಗ ಬಲಿ ಬೇರೆ ಬೇರೆ ಎಂದರು.

ಬಜರಂಗ ಬಲಿಯನ್ನು ನಾವ ಆರಾಧಿಸುತ್ತೇವೆ. ಆದರೆ ಬಿಜೆಪಿಯಿಂದಲೇ ಒಂದು ಮತೀಯ ಸಂಘಟನೆ ಎಂದು ಗುರುತಿಸಲ್ಪಟ್ಟ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಕಾಂಗ್ರೆಸ್ ಹೇಳಿದೆ. ನರೇಂದ್ರ ಮೋದಿ ಪ್ರಧಾನಿಯಾಗಿದ್ದಾಗಲೇ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಶ್ರೀರಾಮ ಸೇನೆಯನ್ನು ಅಲ್ಲಿ ನಿಷೇಧ ಮಾಡಿದರು. ಆಗ ಸಂಪೂರ್ಣ ಮೌನ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಈಗ ಏಕೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗ ದಳ ಕುರಿತು ಧ್ವನಿ ಎತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ತಿವಿದರು.
ಇದು ಟ್ರಬಲ್ ಇಂಜಿನ್ ಸರ್ಕಾರ
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಇದು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರವಲ್ಲ, ಟ್ರಬಲ್ ಇಂಜಿನ್ ಸರ್ಕಾರ ಎಂದು ಅವರು ಲೇವಡಿ ಮಾಡಿದರು. ಒಬ್ಬರು ಕೇಂದ್ರದಲ್ಲಿ ಪ್ರಧಾನಿಯಾಗಿ ಆಡಳಿತ ನಡೆಸಿದರೆ, ಮತ್ತೊಬ್ಬರು ಕರ್ನಾಟಕದಲ್ಲಿ ಕೇಂದ್ರ ಕೈಗೊಂಬೆಯಾಗಿ ಅಧಿಕಾರ ನಡೆಸುತ್ತಾರೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದಿಂದಾಗಿ ಜನರು 40 ಪರ್ಸೆಂಟ್ ಕಮಿಷನ್, ಭ್ರಷ್ಟಚಾರ ವಿಚಾರವಾಗಿ ಬೇಸತ್ತಿದ್ದಾರೆ. ಇಂತಹ 'ಲೂಟಿ ಸರ್ಕಾರ'ವನ್ನು ತಿರಸ್ಕರಿಸಲು ಮತ್ತು ಕಾಂಗ್ರೆಸ್ ಗೆ ಪೂರ್ಣ ಬಹುಮತ ನೀಡಲು ನಿರ್ಧರಿಸಿದ್ದಾರೆ ಎಂದು ಅವರು ಬಿಜೆಪಿಗೆ ಟಾಂಗ್ ನೀಡಿದರು.
ಸದ್ಯ ಕರ್ನಾಟಕದಲ್ಲಿ ವಿಧಾನಸಭೆಗೆ ನಡೆಯುವ ಚುನಾವಣೆ. ಇದು ಪ್ರಧಾನಿಗಾಗಿ ನಡೆಯುತ್ತಿರುವ ಚುನಾವಣೆ ಖಂಡಿತ ಅಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರು ಕರ್ನಾಟಕದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೊಂದು ವಿಪರ್ಯಾಸ ಎಂದು ಪ್ರಧಾನಿ, ಅಮಿತ್ ಶಾ ರೋಡ್ ಕುರಿತು ವ್ಯಂಗ್ಯವಾಡಿದರು.
ಚುನಾವಣೆ ಸಂಬಂಧ ಕಾಂಗ್ರೆಸ್ ತಾನು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಕಾನೂನು ಮೀರುವ ಪಿಎಫ್‌ಐ ಮತ್ತು ಬಜರಂಗದಳ ಆಗಿರಲಿ, ಇಲ್ಲವೇ ವ್ಯಕ್ತಿಗಳಾಗಿರಲಿ ಅಂತಹ ಮತೀಯ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ನಿಷೇಧ ಕುರಿತು ಹೇಳಿತ್ತು. ಇದಾದ ಬಳಿಕ ಬಜರಂಗದಳ ಬ್ಯಾನ್ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ಹುಟ್ಟಿಕೊಂಡವು.












Click it and Unblock the Notifications