ಬೆಳಗಾವಿಯಲ್ಲಿ ಏಕಾಂಗಿಯಾದ DCM ಡಿ.ಕೆ.ಶಿವಕುಮಾರ್, ಏನಾಗ್ತಿದೆ ಜಿಲ್ಲಾ ಕೈ ಪಾಳಯದಲ್ಲಿ?
ಬೆಳಗಾವಿ, ಅಕ್ಟೋಬರ್, 19: ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಮತ್ತೊಂದು ಹಂತ ಪಡೆದುಕೊಂಡಿದ್ದು, ಬುಧವಾರ ಬೆಳಗಾವಿಗೆ ಆಗಮಿಸಿದ್ದ ಡಿಕೆಶಿ ಏಕಾಂಗಿ ಓಡಾಟ ನಡೆಸಿದ್ದಾರೆ.
ಹೌದು ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿವೆ. ಈ ಮಧ್ಯೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬುಧವಾರ ಬೆಳಗಾವಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕರೂ ಡಿಕೆಶಿ ಸ್ವಾಗತಕ್ಕೆ ಬರಲಿಲ್ಲ.

ಅಷ್ಟೇ ಅಲ್ಲದೆ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಶಾಸಕರ ಬಳಗ ಇತ್ತ ಕಡೆ ಸುಳಿಯದೇ ಅಂತರ ಕಾಯ್ದುಕೊಂಡರು. ಈ ಎಲ್ಲಾ ಬೆಳವಣಿಗೆ ಗಮನಿಸಿದ್ದರು ಡಿಕೆಶಿ ಹಾರಿಕೆ ಉತ್ತರ ನೀಡಿ ಕೈತೊಳೆದುಕೊಂಡಿದ್ದು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲ ಹುಟ್ಟುಹಾಕಿದ್ದು ಸುಳ್ಳಲ್ಲ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಹಸ್ತಕ್ಷೇಪದ ವಿಚಾರ ಸದ್ಯ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ಕಾರಣವಾಗಿದೆ. ವಿರೋಧಿ ಬಣದ ನಾಯಕರಿಗೆ ಉನ್ನತ ಹುದ್ದೆ ನೀಡುವ ವಿಚಾರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುನಿಸು ಮತ್ತೊಮ್ಮೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣ ಗೋಚರಿಸುತ್ತಿದೆ.
ರಾಜ್ಯದ ರಾಜಕೀಯ ಒಂದು ಕಡೆ ಇದ್ದರೆ, ಬೆಳಗಾವಿ ರಾಜಕಾರಣ ಯಾವತ್ತೂ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುತ್ತದೆ. ಇಲ್ಲಿ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ಹಾಗೂ ಮನೆತನಗಳ ಪ್ರತಿಷ್ಠೆಗಳೇ ಪ್ರಮುಖ ಆಗಿರುತ್ತವೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೆಲ ವಿಚಾರವಾಗಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಇದರಿಂದ ಸ್ವಪಕ್ಷೀಯ ಸಚಿವ ಸತೀಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಜೋರಾಗಿವೆ.
ಉಪ್ಪು ತಿಂದೋರು ನೀರು ಕುಡಿಲೇಬೇಕು
ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ವಿಚಾರಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದು, ಹಾಲಿಂದು ಹಾಲಿಗೆ, ನೀರಿಂದು ನೀರಿಗೆ, ಉಪ್ಪು ತಿಂದೋನು ನೀರು ಕುಡಿಲೇಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇವೆಲ್ಲ ಹಳೇ ಕಾಲದ ಗಾದೆ ಮಾತುಗಳು. ತಪ್ಪು ಮಾಡಿದವನಿಗೆ ಶಿಕ್ಷೆ ಆಗಬೇಕು. ಪ್ರಾಮಾಣಿಕರಿಗೆ ತೊಂದರೆ ಆಗಬಾರದು. ಯಾರಾದರೂ ಅಕ್ರಮ ಮಾಡಿದರೆ ಅದು ಇಂದಲ್ಲ ನಾಳೆ ಬಯಲಿಗೆ ಬರಬೇಕು. ಸುಮ್ ಸುಮ್ನೆ ಗಾದೆ ಹುಟ್ಟುತ್ತಾ? ತಲ ತಲಾಂತರದ ಸತ್ಯ ಇರುತ್ತದೆ. ಊರಿಗೆ ಬಂದೋಳು ನೀರಿಗೆ ಬರಲ್ವಾ? ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್....ಡ್ಯಾಶ್ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಸತ್ಯವನ್ನು ಮುಚ್ಚಿಹಾಕಲು ಆಗಲ್ಲ, ಕೆಲ ಕಾಲ ಮುಚ್ಚಿಡಬಹುದು ಅಷ್ಟೇ. ಯಾರೇ ತಪ್ಪು ಮಾಡಿದರೂ ಇದ್ರೆ ಶಿಕ್ಷೆ ಆಗಬೇಕು. ಕಾನೂನಿಗಿಂತ ಅತಿರಥರಾದವರು ಯಾರಾದರೂ ಇದ್ದೀವಾ? ನಾನು, ಸಿಎಂ, ಡಿಸಿಎಂ, ಪ್ರಧಾನಿ ಯಾರೂ ಕಾನೂನಿಗೆ ಅತಿರಥರಲ್ಲ. ಯಾರಾದ್ರು ನಾವು above the law ಅಂದುಕೊಂಡಿದ್ದರೆ ಅದಕ್ಕೆ ಸಂವಿಧಾನ ಅವಕಾಶ ನೀಡಿಲ್ಲ. ಅಂಬೇಡ್ಕರ್ ಕಾನೂನಿನ ದೃಷ್ಟಿಯಿಂದ ಎಲ್ಲರೂ ಸಮಾನರು ಎಂದರು.
ಇವರಿಗೆ ಕಾನೂನು ಅನ್ವಯ ಆಗಲ್ಲ, ಏನೇ ಮಾಡಿದರೂ ನಡೆಯುತ್ತದೆ ಅನ್ನೋದು ನಮ್ಮ ದೇಶದಲ್ಲಿ ಇಲ್ಲ. ಯಾರು ತಪ್ಪು ಮಾಡಿದರೂ ಶಿಕ್ಷೆ ಆಗಲೇಬೇಕು. ಯಾರು ತಪ್ಪು ಮಾಡಿದ್ದಾರೆಂದು ಹೇಳುವ ಅಧಿಕಾರ ನನಗೆ ಇಲ್ಲ, ನ್ಯಾಯಾಲಯಕ್ಕೆ ಇದೆ. ನಾವು ಮಾಡಿರಬಹುದು ಅಂತಾ ಹೇಳಬಹುದು, ಮಾಡಿದ್ದಾರೆ ಅಂತಾ ಹೇಳುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಶಾಸಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
135 ಜನ ಕಾಂಗ್ರೆಸ್ಸಿಗರು ಇದ್ದಾರೆ, ಅವರು ಒಗ್ಗಟ್ಟಿದ್ದರೆ ಯಾರು ಬೀಳಿಸಲು ಆಗುತ್ತದೆ? ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಬಂದಾಗ ಸತೀಶ್ ಜಾರಕಿಹೊಳಿಗೆ ಹೋಗಬೇಡಿ ಅಂತಾ ನಾವು ಹೇಳಿಕೊಟ್ಟಿದ್ದೀವಾ? ಅದು ಅವರು ತೆಗೆದುಕೊಂಡಿರುವ ತೀರ್ಮಾನ. 20 ಹಿರಿಯ ಶಾಸಕರು ಪತ್ರ ಬರೆದಿದ್ದರು. ಮತ್ತೊಂದೆಡೆ ನಾವೇನಾದರೂ ಬರೀರಿ ಅಂತಾ ಹೇಳಿದ್ದೆವಾ? ಬಿಜೆಪಿಯವರು ಬರೆಸಿದ್ದರೆ ಇವೆಲ್ಲಾ ಬಿಜೆಪಿಯವರು ಮಾಡುತ್ತಿದ್ದಾರೆ ಅನ್ನಬಹುದು ಎಂದರು.
ರಾಜಣ್ಣ ಅವರ ಬಳಿ ಐವರು ಡಿಸಿಎಂ ಮಾಡಿ ಅಂತಾ ನಾವು ಹೇಳಿ ಮಾಡಿಸಿಲ್ಲ. 135 ಜನ ಒಟ್ಟಿಗೆ ಇದ್ದರೆ ಯಾರು ಅಲ್ಲಾಡಿಸಲು ಅಗುವುದಿಲ್ಲ.ಅವ್ರು ಅಲ್ಲಾಡ್ತಾ ಇದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಹೀಗೆ ಅಲ್ಲಾಡ್ತಾ ಇದ್ರೆ ಇವತ್ತಲ್ಲ ನಾಳೆ ಬಿದ್ದೇ ಬಿಳುತ್ತದೆ ಕಾಂಗ್ರೆಸ್ ಸರ್ಕಾರ. ಜನ ಒಳ್ಳೆಯ ಅಡಳಿತ ಕೊಡಿ ಅಂತಾ ಅಧಿಕಾರ ಕೊಟ್ಟಿದ್ದಾರೆ. ಕಲಾವಿದರ ಬಳಿಯೂ ದುಡ್ಡು ಎತ್ಕೊಂಡು ತಿನ್ನಿ ಅಂತಾ ಅಧಿಕಾರ ಕೊಟ್ಟಿದ್ದಾರಾ.? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.












Click it and Unblock the Notifications