ಬೆಳಗಾವಿಯಲ್ಲೇ ಕೆಎಟಿ ಪೀಠ, ಸಿಎಂ ಭರವಸೆ
ಬೆಳಗಾವಿ, ಡಿ. 6 : ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಪೀಠವನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಕೆಎಟಿ ಸ್ಥಾಪನೆಗೆ ಸಿಎಂ ಒಪ್ಪಿರುವದರಿಂದ ವಕೀಲರು ಪ್ರತಿಭಟನೆ ನಿಲ್ಲಿಸುವುದಾಗಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರು ಮತ್ತು ಬೆಳಗಾವಿಯ ಜನಪ್ರತಿನಿಧಿಗಳು ಶುಕ್ರವಾರ ಬೆಂಗಳೂರಿಗೆ ತೆರಳಿ ಗೃಹ ಕಚೇರಿಯ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಕೆಎಟಿ ಪೀಠ ಸ್ಥಾಪನೆ ಸಂಬಂಧ ಮಾತುಕತೆ ನಡೆಸಿದರು.

ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಂಸದ ಪ್ರಕಾಶ್ ಹುಕ್ಕೇರಿ ಮುಂತಾದವರು ವಕೀಲರ ಜೊತೆ ಚರ್ಚೆ ನಡೆಸಿದರು. ನಂತರ ಮಾತನಾಡಿದ ಸಿಎಂ ಕೆಎಟಿ ಪೀಠ ಸ್ಥಾಪಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು. ನಂತರ ಕೇಂದ್ರಕ್ಕೆ ಪತ್ರ ಬರೆದು, ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು. [ಕೆಎಟಿ ಪೀಠಕ್ಕೆ ಆಗ್ರಹಿಸಿ ಸಿಎಂ ಪ್ರತಿಕೃತಿ ದಹನ]
ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗದಲ್ಲಿ ಸಂಸದರಾದ ಪ್ರಕಾಶ ಹುಕ್ಕೇರಿ, ಪ್ರಭಾಕರ ಕೋರೆ, ಶಾಸಕ ಸಂಜಯ ಪಾಟೀಲ, ಬೆಳಗಾವಿ ವಕೀಲರ ಸಂಘದ ಪ್ರಭಾರ ಅಧ್ಯಕ್ಷ ಆರ್.ಸಿ.ಪಾಟೀಲ ಮುಂತಾದವರಿದ್ದರು.

ಮುಷ್ಕರ ವಾಪಸ್ : ಕೆಎಟಿ ಸ್ಥಾಪನೆಗೆ ಸಿಎಂ ಒಪ್ಪಿಗೆ ನೀಡಿರುವುದರಿಂದ ಶನಿವಾರದಿಂದ ಪ್ರತಿಭಟನೆ ವಾಪಸ್ ಪಡೆಯುತ್ತೇವೆ ಎಂದು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪಾಟೀಲ ಹೇಳಿದ್ದಾರೆ.
ಕೆಎಟಿಪೀಠವನ್ನು ಬೆಳಗಾವಿಯಲ್ಲಿ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ ಒಂದು ವಾರದಿಂದ ವಕೀಲರು ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ಕರೆ ನೀಡಿದ್ದ ಬೆಳಗಾವಿ ಬಂದ್ ವೇಳೆ 6 ಬಸ್ಸುಗಳಿಗೆ ಕಲ್ಲು ತೂರಾಟ ನಡೆದಿತ್ತು.












Click it and Unblock the Notifications