ಬೆಳಗಾವಿ 3 ಮಕ್ಕಳ ಸಾವು ಪ್ರಕರಣದ ಸಮಗ್ರ ವರದಿ ಕೋರಿದ ಸಿಎಂ
ಬೆಳಗಾವಿ, ಜನವರಿ 17: ಬೆಳಗಾವಿಯಲ್ಲಿ ದಡಾರ-ರುಬೆಲ್ಲಾ ಲಸಿಕೆ ಪಡೆದು 3 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಸಮಗ್ರ ತನಿಖಾ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮೂರು ಮಕ್ಕಳ ಸಾವು ಪ್ರಕರಣ ಸಂಭವಿಸಿತ್ತು. ಈ ಘಟನೆಯಲ್ಲಿ ರೂಬೆಲ್ಲಾ ಲಸಿಕೆ ಪಡೆದ ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ 13 ತಿಂಗಳ ಮಗು ಪವಿತ್ರಾ ಹುಲಗೂರ, 14 ತಿಂಗಳ ಮಗು ಮಧು ಕರಗುಂದಿ ಹಾಗೂ ಮಲ್ಲಾಪುರ ಗ್ರಾಮದ 18 ತಿಂಗಳ ಪುಟ್ಟ ಕಂದಮ್ಮ ಚೇತನ ಪೂಜಾರಿ ಮೃತಪಟ್ಟದ್ದವು.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲೇ ಮೂರು ಕಂದಮ್ಮಗಳು ನಿಗೂಢವಾಗಿ ಅಸುನೀಗಿರುವ ಘಟನೆ ನಡೆದಿತ್ತು. ಈ ಸಂಬಂಧ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿತ್ತು. ಇದರ ಬೆನ್ನಲ್ಲೇ ಇದೀಗ ಧಡಾರ್ ರೋಗ ತಡೆಗೆ ನೀಡಲಾಗುವ ರುಬೆಲ್ಲೋ ಚುಚ್ಚುಮದ್ದನ್ನು ಪಡೆದ ಸಂದರ್ಭದಲ್ಲಿ ಆ ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಪ್ರಕರಣದ ಕುರಿತು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಯಿಂದ ವಿವರವಾದ ವರದಿ ಕೇಳಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಸಿಎಂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.
ಬೆಳಗಾವಿಯಲ್ಲಿ ಮೂವರು ಮಕ್ಕಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಸೆಪ್ಟಿಕ್ ಶಾರ್ಟ್ ಸಿಂಡ್ರೋಮ್‌ನಿಂದ ಮಕ್ಕಳು ಮೃತಪಟ್ಟಿರಬಹುದು ಎಂದು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ಬೆಳಗಾವಿಯ 3 ಮಕ್ಕಳ ಸಾವಿಗೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಗೊತ್ತಾಗಿದೆ. ಸಾಲಹಳ್ಳಿ ಪ್ರಾಥಮಿಕ ಕೇಂದ್ರ ಸಿಬ್ಬಂದಿ ನಿರ್ಲಕ್ಷ್ಯವು ತನಿಖೆ ವೇಳೆ ತಿಳಿದು ಬಂದಿದೆ. ನರ್ಸ್ ಸಲ್ಮಾ ಮಹತಾ, ಫಾರ್ಮಸಿಸ್ಟ್ ಜಯರಾಜ್ ಕುಂಬಾರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಆರೋಗ್ಯ ಕೇಂದ್ರದಿಂದ MR ಲಸಿಕೆಯ 6 ವಯಲ್ (Vial) ತೆಗೆದುಕೊಂಡು ಹೋಗಿ ನರ್ಸ್ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿದ್ದರು. ಈ ಮಕ್ಕಳಿಗೆ ಜನವರಿ 12ರಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ರೂಬೆಲ್ಲಾ ಚುಚ್ಚುಮದ್ದು ನೀಡಲಾಗಿತ್ತು ಎಂಬುದು ಬಯಲಾಗಿದೆ.