ಕೇಂದ್ರದಿಂದ ಸವದತ್ತಿ ಶ್ರೀ ಯಲ್ಲಮ್ಮ ದೇಗುಲಕ್ಕೆ ಶತಕೋಟಿ ಅನುದಾನ: ಜಗದೀಶ್ ಶೆಟ್ಟರ್
ಬೆಳಗಾವಿ, ನವೆಂಬರ್ 29: ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಸವದತ್ತಿ ಕ್ಷೇತ್ರ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ಕಾಲ ಸನ್ನಿಹಿತವಾಗಿದೆ. ಕಾರಣ ಕೇಂದ್ರ ಸರ್ಕಾರವು ಶತಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಕುರಿತು ಬೆಳಗಾವಿ ಬಿಜೆಪಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಮಾಹಿತಿ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು 100 ಕೋಟಿ ರೂಪಾಯಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಶುಕ್ರವಾರ ತಿಳಿಸಿದರು.

ಕೇಂದ್ರ ಸರ್ಕಾರವು "Development of lconic tourist centres of global scale 2024-25 ಈ ಯೋಜನೆ ಅಡಿ ಈ ಅನುದಾನವನ್ನು ಕೇಂದ್ರ ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿದೆ. ಈಗಾಗಲೇ ಪ್ರಸ್ತಾಪಸಲಾದ ಯೋಜನೆಯ ಅನುಮೋದನೆಯ ಕುರಿತು ಹಿಂದಿನ ತಿಂಗಳಷ್ಟೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮನವಿ ಮಾಡಿಕೊಳ್ಳಲಾಗಿತ್ತು.
ಸವದತ್ತಿಗೆ ಮೂಲ ಸೌಲಭ್ಯಗಳ ಅಗತ್ಯತೆ
ಸವದತ್ತಿಯ ಶ್ರೀ ರಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮಹತ್ವತೆಯ ಕುರಿತು ಹಾಗೂ ಇಲ್ಲಿ ಬರುವ ಭಕ್ತಾಧಿಗಳ ಅನುಕೂಲಕ್ಕೆ ಮೂಲಭೂತ ಸೌಕರ್ಯದ ಅವಶ್ಯಕತೆಯ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗಿತ್ತು. ಇಲ್ಲಿನ ಅಭಿವೃದ್ಧಿ ಕುರಿತು ತಿಳಿಸಿದ್ದೇವು. ಅಂದು ಕೇಂದ್ರ ಸಚಿವರ ಮುಂದೆ ಅಭಿವೃದ್ಧಿ ಯೋಜನೆಯ ಒಪ್ಪಿಗೆ ನೀಡುವಂತೆ ಕೋರಿದ್ದೇವು ಎಂದು ಹೇಳಿದರು.
ನಮ್ಮ ಬೇಡಿಕೆಗೆ ಸ್ಪಂದಿಸಿ ಅದರಂತೆ ಅಭಿವೃದ್ಧಿಗೆ ಒಪ್ಪಿಗೆ ನೀಡಿ ಅನುದಾನ ಬಿಡುಗಡೆ ಮಾಡಿದ್ದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಂಸದ ಜಗದೀಶ್ ಶೆಟ್ಟರ್ ಅವರು ಇದೇ ವೇಳೆ ಅಭಿನಂದಿಸಿದರು.
ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಎರಡು ದೇವಸ್ಥಾನಗಳಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವು. ಮುಂದಿನ ದಿನಗಳಲ್ಲಿ ಇಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಲಿವೆ ಎಂದರು ವಿವರಿಸಿದರು.
ಸವದತ್ತಿಗೆ ನೂತನ ರೈಲ್ವೆ ಮಾರ್ಗ
ಕೆಲವು ತಿಂಗಳ ಹಿಂದಷ್ಟೇ ಸಂಸದ ಜಗದೀಶ್ ಶೆಟ್ಟರ್ ಅವರು ಸವದತ್ತಿ ಕ್ಷೇತ್ರಕ್ಕೆ ಹೊಸ ರೈಲು ಮಾರ್ಗ ಕಲ್ಪಿಸುವಂತೆ ಅವರು ಮನವಿ ಮಾಡಿದ್ದರು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದರು. ಈ ಸಂಬಂಧ ಸೆಪ್ಟಂಬರ್ ತಿಂಗಳಲ್ಲಿ ರೈಲ್ವೆ ಅಧಿಕಾರಿಗಳ ಜೊತೆಗೆ ಸಭೆ ಸಹ ನಡೆದಿದೆ.
ಸವದತ್ತಿಗೆ ರೈಲ್ವೆ ಮಾರ್ಗ ನಿರ್ಮಾಣವಾಗಬೇಕು ಎಂಬುದು ಲಕ್ಷಾಂತರ ಭಕ್ತರ ಬೇಡಿಕೆ ಆಗಿದೆ. ಬೆಳಗಾವಿಯಿಂದ ರೈಲ್ವೆ ಇಲ್ಲಿಗೆ ಸಂಪರ್ಕಗೊಂಡರೆ ವರ್ಷಗಳ ಕನಸು ನನಸಾಗಲಿದೆ. ಈ ಭಾಗದ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ ಎಂದು ವಿವರಿಸಿದ್ದರು. ಮುಂದಿನ ದಿನಗಳಲ್ಲಿ ರೈಲ್ವೆ ಮಾರ್ಗಕ್ಕೆ ಅನುಮೋದನೆ ಸಿಗುವ ಭರವಸೆ ಇದೆ.












Click it and Unblock the Notifications